ದೇಶದ ಅಭಿವೃದ್ಧಿಗೆ ನೋಟು ಅಮಾನ್ಯೀಕರಣ ಪೂರಕ: ಪ್ರೊ.ಬಿ.ಬಿ. ಕಲಿವಾಳ್
ದಾವಣಗೆರೆ, ಅ.13: ದೇಶದ ಅಭಿವೃದ್ಧಿಗೆ ನೋಟು ಅಮಾನ್ಯೀಕರಣ ಪೂರಕವಾಗಿದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಬಿ. ಕಲಿವಾಳ್ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಎಆರ್‍ಎಂ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೃಷಿ ಅಭಿವೃದ್ಧಿ ಶಾಖೆಯಿಂದ ಭಾರತದ ಆರ್ಥಿಕತೆಯ ಮೇಲೆ ಅಮಾನ್ಯೀಕರಣದ ಪರಿಣಾಮ ಹಾಗೂ ನಂತರದ ವಿವಾದ ಮತ್ತು ತೊಡಕುಗಳು ಎಂಬ ವಿಷಯವಾಗಿ ಏರ್ಪಡಿಸಿದ್ದ ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಭ್ರಷ್ಟಾಚಾರ, ಭಯೋತ್ಪಾದನೆ ಮತ್ತು ಕಪ್ಪುಹಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನೋಟು ಅಮಾನ್ಯೀಕರಣವು ಕೇಂದ್ರ ಸರ್ಕಾರದ ಬಹುದೊಡ್ಡ ಹೆಜ್ಜೆ. ದೇಶದ ಆರ್ಥಿಕತೆಗೆ ಮಾರಕವಾಗಿ ಬೆಳೆಯುತ್ತಿದ್ದ ಪರ್ಯಾಯ ಅರ್ಥ ವ್ಯವಸ್ಥೆಯ ತಡೆಗೆ ಅಮಾನ್ಯೀಕರಣ ಅನಿವಾರ್ಯವಾಗಿತ್ತು ಎಂದ ಅವರು, ಅಮಾನ್ಯಿಕರಣದ ನಂತರ ತೆರಿಗೆ ಸಂಗ್ರಹ ಪ್ರಮಾಣ ಹೆಚ್ಚಳವಾಗಿದೆ. ಅಲ್ಪ ಪ್ರಮಾಣದಲ್ಲಿ ಹಣದುಬ್ಬರ ಉಂಟಾಗಿದ್ದರೂ ದೇಶದ ಆರ್ಥಿಕ ಸಬಲಕ್ಕೆ ಅನುಕೂಲವಾಗಿದೆ. ನಗದು ರಹಿತ ವ್ಯವಹಾರ, ಡಿಜಿಟಲಿಕರಣನಂಥ ಅನೇಕ ಸದುದ್ದೇಶ ಹೊಂದಿದೆ ಎಂದು ಹೇಳಿದರು.
ತೆರಿಗೆ ವಂಚನೆ ತಡೆಯುವ ಜೊತೆಗೆ ದೇಶದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ ಒದಗಿಸುವುದು ಅಮಾನ್ಯೀಕರಣದಿಂದ ಸಾಧ್ಯ. ದೇಶದ ಆರ್ಥಿಕತೆಗೆ ದೀರ್ಘಕಾಲಿಕ ಲಾಭ. ನಮ್ಮ ವಿಶ್ವವಿದ್ಯಾನಿಲಯದಲ್ಲಿ ಸಿಬಿಸಿಎಸ್(ಚಾಯ್ಸ್ ಬೇಸ್ಡ್ ಕ್ರೆಡಿಟ್ ಸಿಸ್ಟಮ್) ಪದ್ಧತಿ ಜಾರಿಗೊಳಿಸುವಾಗಲೂ ಇಂತಹದ್ದೇ ವಿರೋಧ ಎದುರಿಸಬೇಕಾಯಿತು. ಆದರೆ, ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವೇ ಆಗಲಿದೆ ಎಂದು ಅವರು ವಿವರಿಸಿದರು.
ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಜಿ.ಟಿ. ಗೋವಿಂದಪ್ಪ ಮಾತನಾಡಿ, ಭ್ರಷ್ಟಾಚಾರ, ಕಪ್ಪುಹಣ, ನಕಲಿ ನೋಟು ಹಾವಳಿ, ಭಯೋತ್ಪಾದನೆಗೆ ಕಡಿವಾಣ ಹಾಕಲು ನೋಟು ಅಮಾನ್ಯೀಕರಣ ಮಾಡುತ್ತಿರುವುದಾಗಿ ಪ್ರಧಾನಿ ಮೋದಿ ಸಮರ್ಥಿಸಿಕೊಂಡಿದ್ದರು. ಆದರೆ, ನೋಟು ಅಮಾನ್ಯೀಕರಣದಿಂದ ಅಂತಹ ಯಾವುದೇ ಉದ್ದೇಶ ಈಡೇರಿಲ್ಲ ಎಂಬುದನ್ನು ಸರ್ಕಾರದ ಅಂಕಿ-ಅಂಶಗಳೇ ಹೇಳುತ್ತಿವೆ. ಬಡವರು ಮತ್ತು ಅಸಂಘಟಿತ ಕಾರ್ಮಿಕರು ತೊಂದರೆ ಅನುಭವಿಸಿದ್ದನ್ನು ಹೊರತುಪಡಿಸಿ, ಅಮಾನ್ಯೀಕರಣದಿಂದ ದೇಶಕ್ಕೆ ಏನೊಂದೂ ಲಾಭವಾಗಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ದಾದಾಪೀರ್ ನವಿಲೇಹಾಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಪ್ರೊ.ಡಿ.ಹೆಚ್. ಪ್ಯಾಟಿ, ಸಿಬು ಥಾಮಸ್, ಬಿ.ಎಲ್. ಶಿವಮೂರ್ತಿ, ಡಾ.ಅಕ್ರಂ ಬಾಷಾ, ಪಾಲಿಕೆ ಸದಸ್ಯರಾದ ಬೆಳವನೂರು ನಾಗರಾಜಪ್ಪ, ನಾಗರತ್ನಮ್ಮ ಇದ್ದರು.