×
Ad

ಮಕ್ಕಳ ಮುಗ್ಧತೆಯಲ್ಲಿ ಶಕ್ತಿಯಿದೆ: ಡಾ.ಎಚ್.ಎಸ್.ವೆಂಕಟೇಶ ಮೂರ್ತಿ

Update: 2017-10-14 21:50 IST

ತುಮಕೂರು, ಅ.14: ಮಕ್ಕಳ ಮುಗ್ಧತೆಯಲ್ಲಿ ಒಂದು ದೊಡ್ಡ ಶಕ್ತಿ ಇದೆ. ಮಕ್ಕಳಿಗೆ ಜವಾಬ್ದಾರಿ ನೀಡುವುದು ಅವರು ನಮ್ಮ ಆಶಾಕಿರಣ ಎಂಬುದನ್ನು ಬಿಂಬಿಸುತ್ತದೆ ಎಂದು ಹಿರಿಯ ಕವಿ ಡಾ.ಹೆಚ್.ಎಸ್.ವೆಂಕಟೇಶಮೂರ್ತಿ ತಿಳಿಸಿದ್ದಾರೆ.

ನಗರದ ರಾಮಕೃಷ್ಣ-ವಿವೇಕಾನಂದ ಆಶ್ರಮದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಮಕ್ಕಳ ಸಮ್ಮೇಳನ ಉದ್ಘಾಟಿಸಿ ಮಾತನಾಡುತಿದ್ದ ಅವರು, ಮಕ್ಕಳ ಸಾಹಿತ್ಯದಲ್ಲಿ ಮಹತ್ತರ ವಿಚಾರ ಅಡಗಿರುತ್ತದೆ. ಮಕ್ಕಳಿಗಾಗಿ ಬರೆಯುವುದು ಒಂದು ದೊಡ್ಡ ಹೊಣೆಗಾರಿಕೆ. ಮಹಾ ಕಾವ್ಯ ರಾಮಾಯಣ ದರ್ಶಣಂ ರಚಿಸಿದ ರಾಷ್ಟ್ರಕವಿ ಕುವೆಂಪುರವರು ‘ಕಿಂದರಜೋಗಿ’ ಕವನವನ್ನೂ ಬರೆದರು. ಅದು ಕೇವಲ ಚಮತ್ಕಾರವಾದ ರಂಜಕವಾದ ಕವಿತೆ ಅಲ್ಲ. ಜೆರುಸೆಲಂ ಕ್ಷೇತ್ರವನ್ನು ತಮ್ಮ ವಶಪಡಿಸಿಕೊಳ್ಳುವುದರಲ್ಲಿ ಬಲಿಯಾದ ಮಕ್ಕಳ ಕ್ರುಸೇಡ್ಸ್ ಕಥೆಯು ಈ ಕವನದ ಹಿನ್ನೆಲೆ. ಮಕ್ಕಳ ಕವಿತೆ ದೊಡ್ಡ ಸಂಗತಿಯನ್ನು ಪುಟ್ಟ ಹೃದಯದಲ್ಲಿ ಹಿಡಿದಿಟ್ಟು ಕೊಂಡಿರುತ್ತದೆ. ಇಂಗ್ಲಿಷ್ ಪರಂಪರೆ ಮಕ್ಕಳು ಕನ್ನಡ ಪರಂಪರೆಯನ್ನು ಮರೆಯುವಂತೆ ಮಾಡಿದೆ ಎಂದರು. 

ಮೈಸೂರಿನ ಶ್ರೀರಾಮಕೃಷ್ಣ ವಿದ್ಯಾಶಾಲೆಯ ಮುಖ್ಯಸ್ಥ ಸ್ವಾಮಿ ಯುಕ್ತೇಶಾನಂದ ಮಹಾರಾಜ್ ಮಾತನಾಡಿ, ಮನಸ್ಸಿಗೆ ಯಾವುದನ್ನು ಸ್ವೀಕರಿಸಬೇಕು ಅಥವಾ ಯಾವುದನ್ನು ಸ್ವೀಕರಿಸಬಾರದು ಎಂಬ ಎಚ್ಚರವಿರಬೇಕು. ಒಳ್ಳೆಯದನ್ನು ಮಾತ್ರ ಮಾಡುವ ಎಚ್ಚರವೇ ವಿವೇಕ. ವಿವೇಕವಿದ್ದರೆ ಮಾತ್ರ ಆನಚಿದ.ಉನ್ನತ ವಿಚಾರಗಳು ಮಕ್ಕಳಿಗೆ ಅರ್ಥವಾಗುವುದಿಲ್ಲ ಎಂಬುದು ತಪ್ಪು ಕಲ್ಪನೆ ಎಂದು ಹೇಳಿದರು.

ಚಿಂತಕ ಡಾ.ರಾಜೇಂದ್ರ ಮಾತನಾಡಿ, ಧರ್ಮದ ರಹಸ್ಯವಿರುವುದು ಸಿದ್ಧಾಂತದಲ್ಲಿ ಅಲ್ಲ, ಅದರ ಅನುಷ್ಠಾನದಲ್ಲಿ, ಬುದ್ಧಿ ಮನಸ್ಸು ಶರೀರಗಳ ಸಮನ್ವಯತೆಯಲ್ಲಿ ವ್ಯಕ್ತಿತ್ವ ನಿರ್ಮಾಣವಾಗಬೇಕು. ಒಂದು ಕಾಲದಲ್ಲಿ ಕೇವಲ ಆಧ್ಯಾತ್ಮಿಕತೆಗೆ ಮಾತ್ರ ಸೀಮಿತವಾಗಿದ್ದ ಆಶ್ರಮಗಳು ಇಂದು ಸಮಾಜ ಮುಖಿ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಪರಿವರ್ತನಾ ಮನೋಭಾವ ತರುತ್ತಿರುವುದು ಒಂದು ಶುಭೋದಯದ ಸಂಕೇತ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷೆ ಮೂಡುಬಿದಿರೆಯ ಜೈನ್ ಪ್ರೌಢಶಾಲೆಯ ಹತ್ತನೆ ತರಗತಿ ವಿದ್ಯಾರ್ಥಿನಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಬಾಲಪ್ರತಿಭೆ ಕು.ಪಂಚಮಿ ಮಾರೂರು ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News