×
Ad

ವಿರೋಧದ ನಡುವೆ 83ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಮುಂದಾದರೆ ಹೋರಾಟ ಅನಿವಾರ್ಯ: ಸಾಹಿತಿ ಬನ್ನೂರು ಕೆ.

Update: 2017-10-14 21:54 IST

ಮೈಸೂರು, ಅ.14: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಅವ್ಯವಹಾರದ ತನಿಖೆಯಾಗದೆ ಯಾವುದೇ ಕಾರಣಕ್ಕೂ  83ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಬಾರದು. ಒಂದು ವೇಳೆ ವಿರೋಧವನ್ನು ಧಿಕ್ಕರಿಸಿ ಸಮ್ಮೇಳನ ಆಯೋಜಿಸಿದರೆ ಕಾನೂನಾತ್ಮಕ ಹೋರಾಟ ಮಾಡಲಾಗುವುದು ಎಂದು ಸಾಹಿತಿ ಬನ್ನೂರು ಕೆ.ರಾಜು ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಿ.ಗಿರಿಗೌಡರು ಅಧ್ಯಕ್ಷರಾಗಿದ್ದ ಅವಧಿಯಿಂದ ಇಲ್ಲಿಯವರೆಗೂ ಕಸಾಪದಲ್ಲಿ ನಡೆದಿರುವ ಭ್ರಷ್ಟಾಚಾರದ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೆವು. ಜಿಲ್ಲಾಧಿಕಾರಿಯವರು ತನಿಖೆಯ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೂ ಯಾವುದೇ ತನಿಖೆ ನಡೆದಿಲ್ಲ. ಕೋಶಾಧ್ಯಕ್ಷರಿಂದ ಎನ್‍ಒಸಿ ಪಡೆದು ಅದನ್ನೇ ತನಿಖಾ ವರದಿ ಎಂದು ಬಿಂಬಿಸುವ ಮೂಲಕ ಸರ್ಕಾರ ಹಾಗೂ ಸಾರ್ವಜನಿಕರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ವಿಜಯನಗರದಲ್ಲಿರುವ ಕನ್ನಡ ಭವನದ ಮಳಿಗೆಗಳು, ಭವನದ ಬಾಡಿಗೆ ಯಾರ ಖಾತೆಗೆ ಸಂದಾಯವಾಗುತ್ತಿದೆ ಎನ್ನುವ ಬಗ್ಗೆಯೂ ಸರಿಯಾದ ಮಾಹಿತಿ ನೀಡುತ್ತಿಲ್ಲ. ಹಾಗಾಗಿ ಎಲ್ಲಾ ಅವ್ಯವಹಾರಗಳ ಬಗ್ಗೆ ಸೂಕ್ತ ತನಿಖೆ ನಡೆಸಿ ಸತ್ಯಾಸತ್ಯತೆ ಹೊರಬರುವವರೆಗೂ ಸಮ್ಮೇಳನ ಆಯೋಜಿಸಬಾರದು ಎಂದು ಒತ್ತಾಯಿಸಿದರು.

ಸಮ್ಮೇಳನದ ಲಾಂಛನ ಬಿಡುಗಡೆಗೆ ಮೇಯರ್ ಎಂ.ಜೆ.ರವಿಕುಮಾರ್ ಆದಿಯಾಗಿ ಶಾಸಕರು, ಜನಪ್ರತಿನಿಧಿಗಳು ಆಗಮಿಸಿಲ್ಲ. ಇವರ ಪ್ರಬುದ್ಧತೆಯನ್ನು ನಾವು ಗೌರವಿಸುತ್ತೇವೆ. ಕೇವಲ ಪರಿಷತ್‍ನ ನಾಲ್ಕು ಮಂದಿ ಮಾತ್ರ ಪರಿಷತ್ ಎಂಬಂತೆ ವರ್ತಿಸುತ್ತಿದ್ದಾರೆ. ಈ ಸಂಬಂಧ ನಮ್ಮ ಹೋರಾಟವನ್ನು ಮನಗಂಡ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನುಬಳಿಗಾರ್ ದೂರವಾಣಿ ಮೂಲಕ ನಮ್ಮನ್ನು ಸಂಪರ್ಕಿಸಿ ಸಭೆ ಕರೆದು ಸಮಸ್ಯೆ ಬಗೆಹರಿಸುತ್ತೇನೆಂದು ಭರವಸೆ ನೀಡಿದ್ದಾರೆ. ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಣಯದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಅವ್ಯವಹಾರದ ತನಿಖೆ ನಡೆಸಲು ಎಸಿಬಿಗೆ ದೂರನ್ನು ಸಹ ನೀಡಲಾಗುವುದು ಎಂದು ಹೇಳಿದರು.

ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ ಮಾತನಾಡಿ, ನಮ್ಮ ವೇದಿಕೆಯಲ್ಲಿದ್ದವ ಕೆಲವರು ಇಂದು ಅವರಿಂದ ದುಡ್ಡು ತಿಂದು ನಮ್ಮ ವಿರುದ್ಧವೇ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಸಾಹಿತ್ಯ ಸಮ್ಮೇಳನ ಕನ್ನಡದ ದೊಡ್ಡ ಹಬ್ಬ. ಅದನ್ನು ಮೈಸೂರಿನಲ್ಲಿ ಆಯೋಜಿಸಿರುವುದು ಸಂತಸವೇ. ಆದರೆ ತರಾತುರಿಯಲ್ಲಿ ಕನ್ನಡ ಪರ ಸಂಘಟನೆಗಳನ್ನು ಸಭೆ ಕರೆದು ಚರ್ಚಿಸದೆ, ಸಮ್ಮೇಳನದ ಯಶಸ್ವಿಗೆ ಯಾವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎನ್ನುವ ಕುರಿತು ಸಾಹಿತಿಗಳು, ಕನ್ನಡ ಪರ ಹೋರಾಟಗಾರರು, ಸಂಸ್ಕೃತಿ ಚಿಂತಕರನ್ನು ಆಹ್ವಾನಿಸದೆ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು. 

ಸುದ್ದಿಗೋಷ್ಠಿಯಲ್ಲಿ ಸಾಹಿತಿ ಡಾ.ವಿ.ಮುನಿವೆಂಕಟಪ್ಪ, ರೈತ ಮುಖಂಡ ಅತ್ತಳ್ಳಿ ದೇವರಾಜ್, ಬೋಗಾದಿ ಸಿದ್ದೇಗೌಡ, ಗೋಪಾಲರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News