ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳಿಗೆ ಹೆಚ್ಚಿನ ಪ್ರೊತ್ಸಾಹ: ಸಚಿವೆ ಡಾ.ಗೀತಾ ಮಹದೇವಪ್ರಸಾದ್
ಮೈಸೂರು, ಅ.14: ರಾಜ್ಯ ಸರ್ಕಾರ 2014-19ರ ಕೈಗಾರಿಕಾ ನೀತಿಯಲ್ಲಿ ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ಹಾಗೂ ರಿಯಾಯಿತಿಗಳನ್ನು ಘೋಷಣೆ ಮಾಡಿದೆ. ಮುಖ್ಯವಾಗಿ ಎಸ್ಸಿ, ಎಸ್ಟಿ ಮಹಿಳೆಯರು ಹಾಗೂ ಅಲ್ಪಸಂಖ್ಯಾತರಿಗೆ ವಿಶೇಷ ಸವಲತ್ತು ಮತ್ತು ರಿಯಾಯಿತಿಗಳನ್ನು ಒದಗಿಸಿಕೊಟ್ಟಿದೆ ಎಂದು ರಾಜ್ಯದ ಸಣ್ಣ ಕೈಗಾರಿಕೆ ಹಾಗೂ ಸಕ್ಕರೆ ಸಚಿವೆ ಡಾ.ಗೀತಾ ಮಹದೇವಪ್ರಸಾದ್ ತಿಳಿಸಿದರು.
ನಗರದ ಇಂಜಿನಿಯರುಗಳ ಸಂಸ್ಥೆಯಲ್ಲಿ ಶನಿವಾರ ಜಿಲ್ಲಾ ಕೈಗಾರಿಕಾ ಸಂಘಗಳ ಆಶ್ರಯದಲ್ಲಿ ಕೈಗಾರಿಕೆಗಳ ಪ್ರಗತಿ ಪರಿಶೀಲನೆ ಹಾಗೂ ಕುಂದುಕೊರತೆಗಳ ನಿವಾರಣಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ನಾನು ಸಚಿವೆಯಾದ ಬಳಿಕ ಎರಡನೇ ಬಾರಿ ಸಭೆ ನಡೆಸುತ್ತಿದ್ದೇನೆ. ಸಣ್ಣ ಕೈಗಾರಿಕೆಗಳ ಕುರಿತು ತಿಳಿದುಕೊಳ್ಳುತ್ತಿದ್ದೇನೆ. ಕೆಲವು ಕಡೆ ಮೂಲಭೂತ ಸೌಕರ್ಯಗಳ ಅಗತ್ಯತೆ ಇದೆ. ಸಣ್ಣ ಕೈಗಾರಿಕೆಗಳು ಕುಂಠಿತಗೊಂಡಿವೆ ಸರ್ಕಾರದ ಜೊತೆ ಚರ್ಚಿಸಿ ಅವುಗಳ ಏಳಿಗೆಗೆ ಶ್ರಮಿಸಲಾಗುವುದು. ಕೆಲವು ಕುಟುಂಬಗಳು ಸಣ್ಣ ಕೈಗಾರಿಕೆಯನ್ನೇ ಅವಲಂಬಿಸಿಕೊಂಡಿವೆ. ಫಲಾನುಭವಿಗಳು ಸರ್ಕಾರ ನೀಡುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಮೂಲಭೂತ ಸೌಕರ್ಯಗಳ ಕೊರತೆಯಿಂದ ನಿರೀಕ್ಷಿತ ಮಟ್ಟದಲ್ಲಿ ಕೈಗಾರಿಕಾ ಬೆಳವಣಿಗೆ ಆಗಿಲ್ಲ. ಹಣಕಾಸು ಸೌಲಭ್ಯ ಅಲಭ್ಯತೆ, ನೀರು ವಿದ್ಯುಚ್ಛಕ್ತಿ, ಮಾರುಕಟ್ಟೆ, ತಂತ್ರಜ್ಞಾನದ ಕೊರತೆ, ನುರಿತ ಕೆಲಸಗಾರರ ಅಲಭ್ಯತೆ ಹಾಗೂ ಅಗತ್ಯ ಮೂಲಭೂತ ಸೌಲಭ್ಯಗಳ ಕೊರತೆ ಕೈಗಾರಿಕಾ ಬೆಳವಣಿಗೆಗೆ ಕುಂಠಿತವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾವಾರು ಪ್ರಗತಿಪರಿಶೀಲನೆ ನಡೆಸಿ ಹಾಗೂ ಕುಂದುಕೊರತೆಗಳನ್ನು ಚರ್ಚಿಸಿ ಸೂಕ್ತ ಪರಿಹಾರ ಒದಗಿಸಿಕೊಡುವ ನಿಟ್ಟಿನಲ್ಲಿ ಕೈಗಾರಿಕಾ ಬೆಳವಣಿಗೆಗೆ ಹೆಚ್ಚು ಒತ್ತು ಕೊಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಶಾಸಕ ವಾಸು, ಸಣ್ಣ ಕೈಗಾರಿಕೆಗಳ ಜಂಟಿ ನಿರ್ದೇಶಕರಾದ ಮುರುಗೇಶ್, ರಾಮಕೃಷ್ಣೇಗೌಡ, ಕೆಎಸ್ ಎಸ್ ಐಡಿಸಿಯ ಸಣ್ಣಸ್ವಾಮಿ, ಎಫ್‍ಕೆಸಿಸಿ ಉಪಾಧ್ಯಕ್ಷ ಸುಧಾಕರ ಶೆಟ್ಟಿ, ಕೆ ಎಸ್ ಡಿಸಿಸಿಯ ವರಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.