ಅಮಿತ್ ಶಾ ಮಗನ ಕಂಪೆನಿ ವಹಿವಾಟಿನ ಬಗ್ಗೆ ಮೋದಿ ಪ್ರತಿಕ್ರಿಯಿಸಲಿ: ವೇಣುಗೋಪಾಲ್ ಸವಾಲು
ಕೋಲಾರ, ಅ.14: 'ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣ ಮಾಡಲು ಹೊರಟಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಮಗನ ಒಡೆತನಕ್ಕೆ ಸೇರಿದ ಕಂಪೆನಿ ಒಂದೇ ವರ್ಷದಲ್ಲಿ ಸುಮಾರು 16 ಸಾವಿರ ಪಟ್ಟು ಆದಾಯದ ಗಳಿಸಿರುವ ಬಗ್ಗೆ ಬಾಯಿ ಬಿಡಲಿ' ಎಂದು ಎಐಸಿಸಿ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಬಿಜೆಪಿ ಮುಖಂಡರಿಗೆ ಸವಾಲು ಹಾಕಿದರು.
ಕೋಲಾರದ ಜೂನಿಯರ್ ಕಾಲೇಜು ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ನೋಟುಗಳ ಅಮಾನ್ಯೀಕರಣದಿಂದಾಗಿ ದೇಶದ ಅರ್ಥವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳು ಬಾಗಿಲು ಮುಚ್ಚಿವೆ.
ಇಂತಹ ಸಂದರ್ಭದಲ್ಲಿ ವಾರ್ಷಿಕ 50 ಸಾವಿರ ರೂ.ಗಳಷ್ಟಿದ್ದ ಅಮಿತ್ ಶಾ ಅವರ ಮಗ ಜೈ ಅಮಿತ್ ಶಾ ಅವರ ಒಡೆತನಕ್ಕೆ ಸೇರಿದ ಕಂಪೆನಿಯ ವಹಿವಾಟು, ಕಳೆದ ಒಂದು ವರ್ಷದಲ್ಲಿ ಸುಮಾರು 80 ಕೋಟಿ ರೂ. ದಾಟಿದೆ. ಭ್ರಷ್ಟಾಚಾರ ಮುಕ್ತ ಭಾರತದ ಬಗ್ಗೆ ಮಾತನಾಡುವ ಮೋದಿ, ಒಂದೇ ವರ್ಷದಲ್ಲಿ ಇಷ್ಟೊಂದು ಪ್ರಮಾಣದ ವಹಿವಾಟು ಹೇಗೆ ಸಾಧ್ಯವಾಯಿತು ಎಂಬುದನ್ನು ದೇಶಕ್ಕೆ ವಿವರಿಸಲಿ ಎಂದು ಒತ್ತಾಯಿಸಿದರು.
ಎಲ್ಲಾ ವರ್ಗದ ಜನರ ಶ್ರೇಯೋಭಿವೃದ್ಧಿಗಾಗಿ ರಾಜ್ಯ ಸರಕಾರ ಹಲವು ಮಹತ್ತರವಾದ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಕೇಂದ್ರ ಸರಕಾರ ಈ ಹಿಂದೆ ಇದ್ದ ಯುಪಿಎ ಸರಕಾರದ ಯೋಜನೆಗಳಿಗೆ ಹೆಸರು ಬದಲಾವಣೆ ಮಾಡಿ, ತಮ್ಮ ಯೋಜನೆಗಳೆಂದು ಬಿಂಬಿಸಿಕೊಳ್ಳುತ್ತಿದೆ. ಆದ್ದರಿಂದ ಕಳೆದ ನಾಲ್ಕುವರೆ ವರ್ಷಗಳಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರಕಾರ ಮಾಡಿರುವ ಸಾಧನೆಗಳು ಹಾಗೂ ಕಳೆದ ಮೂರುವರೆ ವರ್ಷಗಳಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಮಾಡಿರುವ ಸಾಧನೆಗಳ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ ಎಂದರು.
ಕೇಂದ್ರ ಸರಕಾರದ ತಪ್ಪು ಆರ್ಥಿಕ ನೀತಿಗಳಿಂದಾಗಿ ದೇಶದ ಅರ್ಥ ವ್ಯವಸ್ಥೆ ನೆಲಕಚ್ಚಿದೆ. ಬಿಜೆಪಿ ಹಿರೀಕ ಯಶವಂತ ಸಿನ್ಹಾ ಸೇರಿದಂತೆ ಎಲ್ಲಾ ಆರ್ಥಿಕ ತಜ್ಞರು ಕೇಂದ್ರ ಸರಕಾರದ ನಡೆಯನ್ನು ಟೀಕಿಸುತ್ತಿದ್ದಾರೆ. ಆದರೆ ತಪ್ಪನ್ನು ಒಪ್ಪಿಕೊಳ್ಳದ ಮೋದಿ ಸರಕಾರ, ಟೀಕೆ ಮಾಡುವವರ ವಿರುದ್ಧ ಕೆಟ್ಟ ಭಾಷೆಯಲ್ಲಿ ಚಾರಿತ್ರ್ಯ ಹನನ ಮಾಡುತ್ತಿದೆ ಎಂದು ಕಿಡಿ ಕಾರಿದರು.
ಬೆಲೆ ಏರಿಕೆಯಿಂದ ದೇಶದ ಜನರು ತತ್ತರಿಸಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದು ಬೆಲೆ ಇಳಿದಿದ್ದರೂ ಸಹ ಪೆಟ್ರೋಲ್, ಡೀಸೆಲ್ ದರ ಗಗನ ಮುಖಿಯಾಗಿದೆ. ನಿರುದ್ಯೋಗದ ಸಮಸ್ಯೆ ತೀವ್ರಗೊಂಡಿದ್ದು, ಯುವ ಜನರು ತತ್ತರಿಸಿದ್ದಾರೆ. ಈ ಎಲ್ಲಾ ಸಮಸ್ಯೆಗಳಿಂದ ಮುಕ್ತರಾಗಲು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ವೇಣುಗೋಪಾಲ್ ಮನವಿ ಮಾಡಿದರು.
2018ರ ವಿಧಾನಸಭಾ ಚುನಾವಣೆ ಪಕ್ಷಕ್ಕೆ ಅತ್ಯಂತ ಮಹತ್ವದ್ದಾಗಿದೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಅಶ್ವಮೇಧ ಯಾಗವನ್ನು ಪ್ರಾರಂಭಿಸಿದ್ದೇವೆ. ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದೇ ಆಗಿದೆ ಎಂದು ಹೇಳಿದರು.