ಉಪನ್ಯಾಸಕಿ ರಾಜೀನಾಮೆ: ವಿದ್ಯಾರ್ಥಿಗಳ ಪ್ರತಿಭಟನೆ
ನಾಗಮಂಗಲ, ಅ.14: ಪ್ರಾಂಶುಪಾಲರ ಶಿಷ್ಟಾಚಾರ ಸೂಚನೆಗೆ ಆಕ್ಷೇಪ ವ್ಯಕ್ತಪಡಿಸಿ ಅತಿಥಿ ಉಪನ್ಯಾಸಕಿ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಪಟ್ಟಣದ ಆದಿಚುಂಚಗಿರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಶನಿವಾರ ಪ್ರತಿಭಟನೆ ನಡೆಸಿದರು.
ಕಾಲೇಜಿನ ಪ್ರಾರ್ಥನೆಗೆ ಹಾಜರಾಗದೆ ಮತ್ತು ಗೈರಾದ ಇತರ ಉಪನ್ಯಾಸಕರ ತರಗತಿಗಳಿಗೆ ತನನ್ನು ನಿಯೋಜಿಸಿದ ಪ್ರಾಂಶುಪಾಲರ ವರ್ತನೆಗೆ ಬೇಸತ್ತು ಆಂಗ್ಲ ಭಾಷೆಯ ಅತಿಥಿ ಉಪನ್ಯಾಸಕಿ ಆಶಾ ಕರ್ತವ್ಯಕ್ಕೆ ರಾಜೀನಾಮೆ ನೀಡಿದರು ಎನ್ನಲಾಗಿದೆ.
ಆಶಾ ಅವರ ರಾಜೀನಾಮೆಯಿಂದ ತಮ್ಮ ಪಾಠಪ್ರವಚನಗಳಿಗೆ ತೊಂದರೆಯಾಗಿದೆ. ಪ್ರಾಂಶುಪಾಲರು ಕ್ಷಮೆಯಾಚಿಸಿ ಆಶಾ ಅವರನ್ನು ಮತ್ತೆ ಕೆಲಸಕ್ಕೆ ನಿಯೋಜಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.
ಶ್ರೀಮಠದ ಶಿಕ್ಷಣ ಸಂಸ್ಥೆಗಳಿಗೆ ಸಂಸ್ಕಾರ ಮತ್ತು ಸಂಸ್ಕೃತಿಯ ಶಿಷ್ಟಾಚಾರವಿದೆ. ಅಂತಹ ನಿಯಮಗಳ ಉಲ್ಲಂಘನೆಯಾಗುವ ಸಂದರ್ಭದಲ್ಲಿ ಸರಿಪಡಿಸಿಕೊಳ್ಳುವಂತೆ ಸೂಚನೆ ನೀಡುವುದು ನಮ್ಮ ಜವಬ್ದಾರಿ. ಸೂಚನೆಯನ್ನು ಪಾಲಿಸದೆ ಉದಾಸನೆಯಿಂದ ರಾಜೀನಾಮೆ ನೀಡುವುದು ಎಷ್ಟು ಸರಿ? ವಿದ್ಯಾರ್ಥಿಗಳ ವ್ಯಾಸಂಗದ ಗುಣಮಟ್ಟಕ್ಕೆ ಧಕ್ಕೆಯಾಗದಂತೆ ನಿಗಾ ವಹಿಸಲಾಗುವುದು ಎಂದು ಪ್ರಾಂಶುಪಾಲ ಡಾ.ಪ್ರೋ.ಬಿ.ಕೆ.ಲೋಕೇಶ್ ಸ್ಪಷ್ಟಪಡಿಸಿದ್ದಾರೆ.