ರಸ್ತೆ ಡಾಂಬರೀಕರಣಕ್ಕೆ ಒತ್ತಾಯಿಸಿ ಮನವಿ
ಸೊರಬ,ಅ.15 : ಪಟ್ಟಣ ಪಂಚಾಯ್ತಿವ್ಯಾಪ್ತಿಯ ಉಳವಿ-ಸಾಗರ ರಸ್ತೆಯ 4ನೇವಾರ್ಡಿನ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಕಿತ್ತುಹೋಗಿರುವ ಜಲ್ಲಿ ರಸ್ತೆಗೆ ಡಾಂಬರೀಕರಣ ಮಾಡಿಸಲು ಒತ್ತಾಯಿಸಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪನವರಿಗೆ ಹಿರೇಶಕುನದ ನಿವಾಸಿಗಳು ಮನವಿ ಸಲ್ಲಿಸಿದರು.
ಸರ್ಕಾರಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಈ ರಸ್ತೆಗೆ ಸುಮಾರು 10ವರ್ಷಗಳ ಹಿಂದೆ ಜಲ್ಲಿ ಬಿಚಾವಣೆ ಮಾಡಿದ್ದು ಬಿಟ್ಟರೆ ಈವರೆಗೂ ಡಾಂಬರೀಕರಣ ಮಾಡಿರುವುದಿಲ್ಲ. ಜಲ್ಲಿ ಬಿಚಾವಣೆ ಮಾಡಿರುವ ರಸ್ತೆಯು ಮಳೆಯಿಂದಾಗಿ ಮಣ್ಣು ಸೇರಿದಂತೆ ಹಾಕಿರುವ ಜಲ್ಲಿ ಕೊಚ್ಚಿಕೊಂಡು ಹೋಗಿ ವರ್ಷಗಳೇ ಕಳೆದಿವೆ. ಕೆಸರುಗದ್ದೆಯಂತಾಗಿರುವ ರಸ್ತೆಯು ಇಳಿಜಾರಿನಲ್ಲಿದ್ದು, ಸಾರ್ವಜನಿಕರು ಹಾಗು ಸಣ್ಣ-ಪುಟ್ಟ ವಾಹನ ಸವಾರರು ಓಡಾಡಲು ಪರದಾಡುವಂತಾಗಿದೆ. ಚರಂಡಿಯ ವ್ಯವಸ್ತೆಯೂ ಇಲ್ಲದಿರುವುದರಿಂದ ಮಳೆಗಾಲದಲ್ಲಿ ಮೇಲಿನಿಂದ ಹರಿದು ಬರುವ ನೀರು ಸಂಪೂರ್ಣ ರಸ್ತೆಯನ್ನೆ ಹಾಳುಮಾಡಿದೆ.
ಪಟ್ಟಣ ಪಂಚಾಯ್ತಿಯವರು ಸಂಪೂರ್ಣ ಹಾಳಾಗಿ ಹದಗೆಟ್ಟಿರುವ ರಸ್ತೆ, ಚರಂಡಿಗಳನ್ನು ನಿರ್ಮಿಸುವ ಬದಲಾಗಿ, ಇದೇ ವಾರ್ಡಿನಲ್ಲಿ ಸುಸ್ಥಿತಿಯಲ್ಲಿರುವ ಚರಂಡಿ ಹಾಗು ರಸ್ತೆಗಳನ್ನು ಕಿತ್ತು ಅಲ್ಲಿ ಪುನಃ ಹೊಸದಾಗಿ ಕಾಂಕ್ರೇಟ್ ರಸ್ತೆ ಮತ್ತು ಚರಂಡಿಗಳನ್ನು ನಿರ್ಮಿಸುತ್ತಿದ್ದಾರೆ. ಹದಗೆಟ್ಟಿರುವ ರಸ್ತೆಯನ್ನು ನಿರ್ಮಿಸಿಕೊಡುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಪಟ್ಟಣ ಪಂಚಾಯ್ತಿಯಿಂದ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಆದ್ದರಿಂದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಪಕ್ಕದ ದುಸ್ಥಿತಿಯಲ್ಲಿರುವ ಈ ರಸ್ತೆಗೆ ಕೂಡಲೇ ಡಾಂಬರೀಕರಣ ಹಾಗು ರಸ್ತೆಯ ಎರಡೂ ಬದಿಗಳಲ್ಲಿ ಚರಂಡಿ ವ್ಯವಸ್ಥೆ ಕಲ್ಪಿಸಿಕೊಡಲು ಪಪಂಗೆ ಆದೇಶಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪರಶುರಾಮಪ್ಪ ಸಣ್ಣಬೈಲ್, ಡಿ.ಲೇಕಪ್ಪ, ಎಂ.ಮಂಜುನಾಥ, ಎಲ್ಲಪ್ಪ, ಮಂಜಮ್ಮ, ಎ.ಕೆ.ನಿಂಗಪ್ಪ, ಗೌರಮ್ಮ, ಬಸವರಾಜ್ ಮತ್ತಿತರರಿದ್ದರು.