ಜೆಡಿಎಸ್ ಅಧಿಕಾರಕ್ಕೆ:ಎಚ್.ವಿಶ್ವನಾಥ್ ವಿಶ್ವಾಸ
ಮಂಡ್ಯ, ಅ.15: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರ ಹಿಡಿಯುತ್ತದೆ. ಅದಕ್ಕೆ ಪೂರಕವಾದ ವಾತಾವರಣವೂ ಇದೆ ಎಂದು ಜೆಡಿಎಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ವಿಶ್ವನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರವಿವಾರ ಖಾಸಗಿ ಕಾರ್ಯಕ್ರಮಕ್ಕೆ ನಗರಕ್ಕಾಗಮಿಸಿ ಪ್ರವಾಸಿಮಂದಿರದಲ್ಲಿ ಪಕ್ಷದ ಮುಖಂಡರ ಜತೆ ಮಾತನಾಡಿದ ಅವರು, ಪಕ್ಷ ಸಂಘಟನೆಗೆ ಒಗ್ಗಟ್ಟಿನಿಂದ ಶ್ರಮಿಸುವಂತೆ ಸಲಹೆ ಮಾಡಿದರು.
ಸದ್ಯದಲ್ಲೇ ಜಿಲ್ಲೆಗೆ ಅಧಿಕೃತ ಭೇಟಿ ನೀಡಿ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತೇನೆ. ಮುಖಂಡರು, ಕಾರ್ಯಕರ್ತರ ಜತೆ ಮನೆಮನೆಗೆ ಭೇಟಿ ನೀಡುತ್ತೇನೆ ಎಂದವರು ಹೇಳಿದರು.
ನನ್ನ ರಾಜಕೀಯ ಹೋರಾಟ ಆರಂಭವಾದದ್ದೇ ಮಂಡ್ಯ ಜಿಲ್ಲೆಯಿಂದ. ಮೈಸೂರಿನವನಾದರೂ ಮಂಡ್ಯದ ಜತೆ ಅವಿನಾವ ಸಂಬಂಧವಿದೆ ಎಂದು ಅವರು ತಮ್ಮ ಹಳೆಯ ದಿನಗಳನ್ನು ನೆನಪು ಮಾಡಿಕೊಂಡರು.
ತನ್ನ ಗೆಳೆಯರಾಗಿದ್ದ ದಿವಂಗತ ಮಾಜಿ ಶಾಸಕ ಎನ್.ತಮ್ಮಣ್ಣ ಒಳಗೊಂಡಂತೆ, ನಿತ್ಯ ಸಚಿವ ಕೆ.ವಿ.ಶಂಕರಗೌಡ, ಮಾಜಿ ಸಚಿವ ದಿವಂಗತ ಎಸ್.ಡಿ.ಜಯರಾಂ, ಇತರ ರಾಜಕೀಯ ದಿಗ್ಗಜರನ್ನು ಸ್ಮರಿಸಿದರು.
ಮಾಜಿ ಶಾಸಕಿ ಪ್ರಭಾವತಿ ಜಯರಾಂ, ಜಿಪಂ ಸದಸ್ಯ ಎನ್.ಶಿವಣ್ಣ, ಮಾಜಿ ಸದಸ್ಯರಾದ ಎಚ್.ಎಲ್.ಶಿವಣ್ಣ, ಕೆ.ಎಸ್.ವಿಜಯಾನಂದ, ಮೈಷುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಕೀಲಾರ ರಾಧಾಕೃಷ್ಣ, ಡಾ.ಕೃಷ್ಣ, ರಾಜ್ಯ ಯುವ ಜೆಡಿಎಸ್ ಪ್ರಧಾನಕಾರ್ಯದರ್ಶಿ ದ್ಯಾಪಸಂದ್ರ ಶಂಕರಲಿಂಗೇಗೌಡ, ಇತರ ಮುಖಂಡರು ಉಪಸ್ಥಿತರಿದ್ದರು.