×
Ad

ಸಾಗರ : ಬೃಹತ್ ರೈತ ಸಮಾವೇಶ ಕಾರ್ಯಕ್ರಮ

Update: 2017-10-16 17:17 IST

ಸಾಗರ,ಅ.16 : ರೈತರು ಬೆಳೆದ ಬೆಲೆಗೆ ವೈಜ್ಞಾನಿಕ ಬೆಲೆ ನಿಗಧಿ ಮಾಡಬೇಕು ಹಾಗೂ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದಡಿ ವೇತನ ಹೆಚ್ಚಳ ಮಾಡಿದಂತೆ ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಬೆಲೆ ನಿಗಧಿ ಮಾಡಬೇಕು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದ್ದಾರೆ. 
ಇಲ್ಲಿನ ಗಾಂಧಿಮೈದಾನದಲ್ಲಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ರೈತರ ಸಾಲ ಮನ್ನಕ್ಕೆ ಅರ್ಜಿ ಸಲ್ಲಿಸುವ ಬೃಹತ್ ರೈತ ಸಮಾವೇಶ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. 

ಎಲ್ಲಿಯವರೆಗೆ ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗಧಿ ಮಾಡುವುದಿಲ್ಲವೋ, ಅಲ್ಲಿಯವರೆಗೆ ರೈತರ ಸಾಲ ಮರುಪಾವತಿ ಮಾಡಿ ಎಂದು ಕೇಳುವ ನೈತಿಕತೆ ಯಾರಿಗೂ ಇಲ್ಲ. ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿರುವ ಹಾಗೂ ರಾಜ್ಯ ಸರ್ಕಾರ ಸಹಕಾರಿ ಸಂಸ್ಥೆ ಇನ್ನಿತರೆ ಸಂಘಸಂಸ್ಥೆಗಳಲ್ಲಿ ರೈತರು ಮಾಡಿಕೊಂಡಿರುವ ಸಾಲವನ್ನು ಮನ್ನ ಘೋಷಣೆ ಮಾಡದೆ ಹೋದಲ್ಲಿ, ಸಾಲದಿಂದ ಮುಕ್ತರಾಗಿದ್ದೇವೆ ಎಂದು ನಾವೇ ಘೋಷಣೆ ಮಾಡಿಕೊಳ್ಳುತ್ತೇವೆ. ಯಾರಾದರೂ ಸಾಲ ಕಟ್ಟಿ ಎಂದು ನೋಟಿಸ್ ನೀಡುವುದಾಗಲೀ, ನಿಮ್ಮ ಮನೆಗೆ ಬಂದು ಬೆದರಿಕೆ ಹಾಕುವುದಾಗಲಿ ಮಾಡಿದರೆ ಅಂತಹವರನ್ನು ಕಟ್ಟಿಹಾಕಿ, ತಾಲ್ಲೂಕು ಆಡಳಿತಕ್ಕೆ ತಿಳಿಸಿ ಎಂದು ಕರೆ ನೀಡಿದರು. 

ಪ್ರಧಾನಿ ನರೇಂದ್ರ ಮೋದಿಯವರು ಚುನಾವಣೆ ಪೂರ್ವದಲ್ಲಿ ರೈತರು ಬೆಳೆದ ಉತ್ಪನ್ನಗಳ ಮೇಲೆ ಶೇ. 50ರಷ್ಟು ಲಾಭಾಂಶ ಕೊಡುತ್ತೇವೆ ಎಂದು ಹೇಳಿದ್ದರು. ಘೋಷಣೆ ಮಾಡಿ ಮೂರು ವರ್ಷ ಕಳೆದರೂ ಈತನಕ ಅದನ್ನು ಅನುಷ್ಟಾನಕ್ಕೆ ತಂದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಡಾ. ಸ್ವಾಮಿನಾಥನ್ ವರದಿ ಆಧರಿಸಿ ಮಾಡಿದ ಘೋಷಣೆ ಈಡೇರಿಸಲು ಮೀನಾಮೇಷ ಎಣಿಸುತ್ತಿರುವುದು ಖಂಡನೀಯ. ಸಂಸದ ಯಡಿಯೂರಪ್ಪ ಅವರು ಪ್ರಧಾನಿ ಅವರ ಮೇಲೆ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿರುವ ರೈತರ ಸಾಲಮನ್ನಾ ಮಾಡುವಂತೆ ಒತ್ತಾಯ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರೈತರು ಬಿಜೆಪಿ ತಕ್ಕಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು. 

ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಕಾರಿ ಸಂಸ್ಥೆಗಳಲ್ಲಿರುವ ರೈತರ 8ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದ್ದಾಗಿ ಹೇಳಿ ಬೀಗುತ್ತಿದ್ದಾರೆ. ಉಳಿದ ಎರಡೂವರೆ ಸಾವಿರ ಕೋಟಿ ರೂ. ಸಾಲವನ್ನು ಯಾರು ಮನ್ನಾ ಮಾಡುತ್ತಾರೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಬೇಕು. ಇಲ್ಲವಾದಲ್ಲಿ ರೈತರು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಪೂರ್ಣ ಸಾಲಮನ್ನಾ ಆಗುವವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು. 

ಚೆನೈ ಹೈಕೋರ್ಟ್ ತಮಿಳುನಾಡು ಸರ್ಕಾರಕ್ಕೆ ರೈತರ ಸಾಲಮನ್ನಾ ಮಾಡುವಂತೆ ಸೂಚನೆ ನೀಡಿದೆ. ಅಲಹಬಾದ್ ಹೈಕೋರ್ಟ್ ಅಲ್ಲಿನ ಸರ್ಕಾರಕ್ಕೆ ರೈತರ ಸಾಲಮನ್ನಾ ಮಾಡಬಹುದಲ್ಲಾ ಎಂದು ಪ್ರಶ್ನಿಸಿದೆ. ಅದೇ ರೀತಿ ದೇಶದ ಎಲ್ಲ ರಾಜ್ಯಗಳಲ್ಲಿರುವ ರೈತರ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡದೆ ಹೋದರೆ, ಪ್ರಧಾನಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳ ವಿರುದ್ದ ಸುಪ್ರೀಂ ಕೋರ್ಟ್‍ನಲ್ಲಿ ಸಾಲಮನ್ನಾಕ್ಕೆ ಒತ್ತಾಯಿಸಿ ದಾವೆ ಹೂಡಲಾಗುತ್ತದೆ. ಕಾನೂನು ಹೋರಾಟದ ಮೂಲಕವಾದರೂ ರೈತರ ಸಾಲಮನ್ನಾ ಹೋರಾಟ ಮುಂದುವರೆಸಲಾಗುತ್ತದೆ ಎಂದು ಹೇಳಿದರು. 

ರೈತ ಪರವಾಗಿ ಮಾತನಾಡ ಬೇಕಾಗಿದ್ದ ಶಾಸಕರು, ಸಂಸದರು ನಮ್ಮ ಪಾಲಿಗೆ ಸತ್ತು ಹೋಗಿದ್ದಾರೆ. ದೇಶದಲ್ಲಿ ಸುಮಾರು 7.50 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಣ್ಣಪುಟ್ಟ ವಿಷಯಗಳಿಗೆ ವಿಶೇಷ ಅಧಿವೇಶನ ಕರೆಯಲಾಗುತ್ತದೆ. ಆದರೆ ರೈತರ ಆತ್ಮಹತ್ಯೆ ಬಗ್ಗೆ ಗಂಭೀರ ಚರ್ಚೆ ನಡೆಸಲು ವಿಶೇಷ ಅಧಿವೇಶನ ಕರೆಯಿರಿ ಎಂದು ಹೇಳುವ ಜನಪ್ರತಿನಿಧಿಗಳ ಬಾಯಿ ಕಟ್ಟಿ ಹೋಗಿದೆ. ಇಂತಹವರಿಗೆ ಚುನಾವಣೆ ಸಂದರ್ಭದಲ್ಲಿ ರೈತರು ತಕ್ಕಪಾಠ ಕಲಿಸಬೇಕು ಎಂದರು. 

ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿರುವ ರೈತರ ಸಾಲಮನ್ನಾಕ್ಕೆ ಒತ್ತಾಯಿಸಿ ನ. 20ರಂದು ನವದೆಹಲಿಯಲ್ಲಿ ಬೃಹತ್ ಹಕ್ಕೊತ್ತಾಯದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಯು ರಾಮಲೀಲಾ ಮೈದಾನದಲ್ಲಿ ನಡೆಯಲಿದ್ದು, ದೇಶದ ಎಲ್ಲ ರಾಜ್ಯಗಳ ಸುಮಾರು 50 ಲಕ್ಷ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಒಂದೊಮ್ಮೆ ಸಾಲಮನ್ನಾ ಘೋಷಣೆ ಮಾಡದೆ ಹೋದಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗುವುದು ಅನಿವಾರ್ಯವಾಗುತ್ತದೆ. ನ. 7ರಂದು ಶಿವಮೊಗ್ಗದಲ್ಲಿ ಸಹ ರೈತರ ಸಾಲಮನ್ನಾ ಅರ್ಜಿ ಪಡೆಯುವ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಾಗಿದೆ ಎಂದರು. 

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಕೆ.ಮಂಜುನಾಥ ಗೌಡ, ಪ್ರಮುಖರಾದ ಗೂರಲಕೆರೆ ಚಂದ್ರಶೇಖರ್, ನಾಗಣ್ಣ, ವಸಂತಕುಮಾರ್, ಇಂದೂಧರ, ವಿರೇಶ್ ಪಾಟೀಲ್, ಡಿ.ಎಸ್.ಈಶ್ವರಪ್ಪ, ಐ.ವಿ.ಹೆಗಡೆ ಸಿದ್ದಾಪುರ, ರಾಘವೇಂದ್ರ ನಾಯ್ಕ ಇನ್ನಿತರರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News