ಜನೋಪಯೋಗಿ ಸ್ಥಳದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲು ಒತ್ತಾಯ
ಚಿಕ್ಕಮಗಳೂರು, ಅ.16: ಚಿಕ್ಕಮಗಳೂರು ನಗರದಲ್ಲಿ ತೆರೆಯಲು ಉದ್ದೇಶಿಸಿರುವ ಇಂದಿರಾ ಕ್ಯಾಂಟೀನ್‍ನನ್ನು ಜನೋಪಯೋಗಿ ಸ್ಥಳದಲ್ಲಿ ತೆರೆಯಬೇಕು ಎಂದು ಶಂಕರಪುರ ಮತ್ತು ಲಕ್ಷ್ನೀಶ ನಗರ ನಿವಾಸಿಗಳ ವೇದಿಕೆಯ ಕಾರ್ಯಕರ್ತರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ನಗರದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲು ಉದ್ದೇಶಿಸಿರುವ ಕ್ರಮ ಸ್ವಾಗತಾರ್ಹ. ಕ್ಯಾಂಟೀನ್ ತೆರೆಯಲು ಉತ್ತಮ ಸ್ಥಳ ಗುರುತಿಸುವುದು ಸೂಕ್ತ. ಕ್ಯಾಂಟೀನ್ ತೆರೆಯಲು ಅಜಾದ್ ಪಾರ್ಕ್‍ನಲ್ಲಿರುವ ಪಿಡಬ್ಲ್ಯೂಡಿ ಕಛೇರಿ ಆವರಣ ಸೂಕ್ತವಾಗಿದೆ. ಈ ಕಛೇರಿಯು ಆವರಣ ತುಂಬಾ ವಿಶಾಲವಾಗಿದ್ದು, ಅಂಬೇಡ್ಕರ್ ರಸ್ತೆಗೆ ಹೊಂದಿಕೊಂಡಿರುತ್ತದೆ. ಈ ಕಛೇರಿಯು ಒಂದು ಕಟ್ಟಡದ ಭಾಗ ಅಂಬೇಡ್ಕರ್ ರಸ್ತೆಗೆ ಹೊದಿಕೊಂಡಂತೆ ಖಾಲಿ ಇರುತ್ತದೆ ಎಂದು ತಿಳಿಸಿದ್ದಾರೆ.
ಈ ಭಾಗದ ಕಾಂಪೌಂಡ್ ಗೋಡೆ ತೆರವುಗೊಳಿಸಿ ಅಂಬೇಡ್ಕರ್ ರಸ್ತೆಗೆ ಹೊಂದಿಕೊಂಡಂತೆ ಪ್ರಾರಂಭಿಸಬಹುದು. ಇಲ್ಲಿ ನಲ್ಲಿ ನೀರಿನ ವ್ಯವಸ್ಥೆ ಇದೆ. ಕಾಂಪೌಂಡ್ ಪಕ್ಕದಲ್ಲಿ ಚರಂಡಿ ಹಾಗೂ ಒಳ ಚರಂಡಿ ಇರುವುದರಿಂದ ತುಂಬಾ ಅನುಕೂಲವಾಗುತ್ತದೆ.
ಈ ಭಾಗದಲ್ಲಿ ಸರ್ಕಾರಿ ಆಸ್ಪತ್ರೆ, ಜಿಲ್ಲಾ ಆಡಳಿತ ಕಛೇರಿ ಇದ್ದು ಜನರಿಗೆ ಅನುಕೂಲವಾಗುತ್ತದೆ. ಗ್ರಾಮೀಣ ಪ್ರದೇಶದಿಂದ ಬರುವ ಕಾರ್ಮಿಕ ವರ್ಗದವರು ಹಾಗೂ ಕಟ್ಟಡ ಕಾರ್ಮಿಕರು, ಬಡ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕ್ಯಾಂಟೀನ್‍ನಿಂದ ಲಾಭವಾಗಲಿದೆ. ಈ ಸ್ಥಳವು ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಸಂತೆ ಮೈದಾನ, ಇವುಗಳಿಗೆ ಸಮೀಪವಿರುವುದರಿಂದ ಬಡವರಿಗೆ ಅನುಕೂಲವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಮನವಿ ಸಲ್ಲಿಸುವಾಗ ಶಂಕರಪುರ ಮತ್ತು ಲಕ್ಷ್ಮೀಶ ನಗರ ನಿವಾಸಿಗಳ ಹಿತಾರಕ್ಷಣ ವೇದಿಕೆಯ ಸತ್ಯನಾರಾಯಣ, ಅನಿಲ್ ಆನಂದ್, ದಲಿತ ಜನಸೆನಾ, ಎಂ.ರುದ್ರಪ್ಪ ಉಪಸ್ಥಿತರಿದ್ದರು.