×
Ad

ಸುಳ್ಳು ಹೇಳುವುದೇ ಬಿಜೆಪಿಯ ಸಾಧನೆ : ಕೆಪಿಸಿಸಿ ಉಸ್ತುವಾರಿ ಮಧುಯಾಸ್ಕಿ ಗೋಡ್

Update: 2017-10-16 19:48 IST

ಸೊರಬ,ಅ.16: ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‍ಶಾರವರ ಮಗನ ಹತ್ತಿರ ಕೇವಲ ರೂ. 50 ಸಾವಿರ ಇದ್ದದ್ದು, ಕೇವಲ ಮೂರೇ ವರ್ಷದಲ್ಲಿ ರೂ. 80 ಕೋಟಿ ಆದಾಯ ಗಳಿಸಿದ್ದೆ ಪ್ರಧಾನಿ ಮೋದಿ ಸರ್ಕಾರದ ಸಾಧನೆ ಎಂದು ಎಐಸಿಸಿ ಕಾರ್ಯದರ್ಶಿ ಮತ್ತು ಕೆಪಿಸಿಸಿ ಉಸ್ತುವಾರಿ ಮಧುಯಾಸ್ಕಿಗೋಡ್ ಹೇಳಿದರು.

ಸೋಮವಾರ ಪಟ್ಟಣದ ಅನ್ನಪೂರ್ಣೇಶ್ವರಿ ಸಭಾಭವನದಲ್ಲಿ ತಾಲ್ಲೂಕು ಕಾಂಗ್ರೆಸ್ ಬ್ಲಾಕ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಾತಿ-ಧರ್ಮಗಳ ಮಧ್ಯೆ ದ್ವೇಷದ ಬೀಜವನ್ನು ಬಿತ್ತುತ್ತಿದ್ದಾರೆ. ಗುಜರಾತ್‍ನಲ್ಲಿ ದಲಿತರ ಮೇಲೆ ನಿರಂತರ ದೌಜನ್ಯ ನಡೆಯುತ್ತಿದೆ. ಜಿಎಸ್‍ಟಿ ಮೂಲಕ ದೇಶದ ಜನಸಾಮಾನ್ಯರ ಬೆನ್ನೆಲುಬು ಮುರಿದಿದ್ದಾರೆ. ಸುಳ್ಳು ಹೇಳುವುದೇ ಬಿಜೆಪಿಯ ಸಾಧನೆಯಾಗಿದೆ. ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಜೈಲು ಪಾಲಾಗಿ ಶಿವಮೊಗ್ಗ ಜಿಲ್ಲೆಯ ಮರ್ಯಾದೆ ಹರಾಜು ಹಾಕಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಬರದಂತೆ ಕಾರ್ಯಕರ್ತರು ಸಂಘಟಿತರಾಗಿ ಕಾರ್ಯನಿರ್ವಹಿಸಬೇಕು. 

ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತ್ರತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದುಳಿದವರ, ಅಲ್ಪಸಂಖ್ಯಾತರ, ದೀನದಲಿತರ ಪರವಾಗಿ ಅನೇಕ ಕಾರ್ಯಕ್ರಮಗಳನ್ನು ನೀಡಿದೆ. ಮುಂದಿನ ಚುನಾವಣೆಯಲ್ಲೂ ಕಾಂಗ್ರೆಸ್ ಅಧಿಕಾರಿಕ್ಕೆ ಬರಲಿದ್ದು, ಕಾರ್ಯಕರ್ತರು, ಮುಖಂಡರು ಬೂತ್ ಮಟ್ಟದಿಂದ ಸಂಘಟನೆಗೆ ಪ್ರಯತ್ನಿಸಬೇಕು. ಸರ್ಕಾರದ ಕಾರ್ಯಕ್ರಮಗಳನ್ನು ಪ್ರತಿ ಮನೆಮನೆಗೂ ತಲುಪಿಸುವ ಕೆಲಸ ಮಾಡಬೇಕು. ಪಕ್ಷದ ತಾಲ್ಲೂಕು ಹಾಗೂ ಜಿಲ್ಲಾ ಅಧ್ಯಕ್ಷರುಗಳು ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿಯಬಾರದು. ಕೇವಲ ತೋರಿಕೆಗಾಗಿ ಸಭೆ ಸಮಾರಂಭಗಳು ನಡೆಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಜನರ ಮನಸ್ಸನ್ನು ಅರ್ಥ ಮಾಡಿಕೊಂಡು ಕೆಲಸ ಮಾಡಬೇಕು. ಪಕ್ಷ ಸಂಘಟನೆಗೆ ಮುಂದಾಗದ ನಿಷ್ಕ್ರೀಯ ಪಧಾಧಿಕಾರಿಗಳನ್ನು ಕೈಬಿಟ್ಟು, ಪಕ್ಷದ ಸಂಘಟನೆಯಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವವರನ್ನು ಜವಾಬ್ದಾರಿ ವಹಿಸಬೇಕೆಂದು  ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ ಸೊರಬ ತಾಲ್ಲೂಕು ಸಮಾಜವಾದಿ ಹೋರಾಟದ ನೆಲೆಯಾಗಿದೆ. ನಾಯಕರನ್ನು ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಯಾರೋ ಪಕ್ಷ ಬಿಟ್ಟ ಮಾತ್ರಕ್ಕೆ ಎದೆಗುಂದಬೇಕಾಗಿಲ್ಲ. ಕಾರ್ಯಕರ್ತರು ಪಕ್ಷದ ಸಂಘಟನೆ ಮೂಲಕ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸಬೇಕೆಂದ ಅವರು ಬಸವಣ್ಣನವರ ತತ್ವ ಸಿದ್ದಾಂತವನ್ನು ಚಾಚು ತಪ್ಪದೇ ಎಲ್ಲಾ ಜಾತಿ ಜನಾಂಗದವರನ್ನು ಸಾಮಾಜಿಕ ನ್ಯಾಯ ಕಲ್ಪಿಸುವಲ್ಲಿ ಕಾಂಗ್ರೆಸ್ ಪ್ರಮುಖ ಪಾತ್ರ ವಹಿಸಿದ ಏಕೈಕ ಪಕ್ಷವಾಗಿದೆ ಎಂದರು. 

ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀ.ನ. ಶ್ರೀನಿವಾಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಎಸ್. ಚಂದ್ರಭೂಪಾಲ, ಜಿಲ್ಲಾ ಉಪಾಧ್ಯಕ್ಷ ಹೆಚ್. ಶ್ರೀಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜೆ. ಶಿವಾನಂದಪ್ಪ, ಚೌಟಿ ಚಂದ್ರಶೇಖರ ಪಾಟೀಲ್, ಮಹಿಳಾ ಅಧ್ಯಕ್ಷೆ ಸುಮಾ ಗಜಾನನ, ಪ್ರಮುಖರಾದ ಪಲ್ಲವಿ, ಆಗಾಖಾನ್, ಕಲಗೋಡು ರತ್ನಕರ, ಲಕ್ಷ್ಮೀಕಾಂತ್ ಚಿಮಣೂರು, ಕೆ. ಮಂಜುನಾಥ್, ಬಾಸೂರು ಚಂದ್ರೇಗೌಡ, ಸುಜಾಯತ್‍ಉಲ್ಲಾ, ನಾಗರಾಜ ಚಿಕ್ಕಸವಿ, ರಶೀದ್ ಹಿರೇಕೌಂಶಿ, ಅಹಮದ್ ಶರೀಫ್, ಝುಲ್ಫೀಕರ್, ಕರುಣಾಕರ, ರಾಮಲಿಂಗಯ್ಯ, ಜಿ. ಕೆರಿಯಪ್ಪ, ಕಲ್ಲಪ್ಪ ಚಿತ್ರಟ್ಟೆಹಳ್ಳಿ, ರಾಯನ್ ಗೋಪಾಲಪ್ಪ,  ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News