×
Ad

ಮಡಿಕೇರಿ : ಮೂವರು ಬೈಕ್ ಚೋರರ ಬಂಧನ

Update: 2017-10-16 19:54 IST

ಮಡಿಕೇರಿ,ಅ.17:ಮಡಿಕೇರಿ ನಗರದಲ್ಲಿ ಕಳೆದ 3-4 ತಿಂಗಳಿನಿಂದ ರಸ್ತೆ ಬದಿಯಲ್ಲಿ ಮತ್ತು ಮನೆಯ ಮುಂದೆ ನಿಲ್ಲಿಸಿದ್ದ ಮೋಟಾರು ಸೈಕಲ್‍ಗಳನ್ನು ಕಳ್ಳತನ ಮಾಡುತ್ತಿದ್ದ ಕೇರಳ ಮೂಲದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಮಡಿಕೇರಿ ನಗರ ಪೊಲೀಸ್ ಠಾಣಾ ಉಪ ನಿರೀಕ್ಷಕರು ಮತ್ತು ಸಿಬ್ಬಂದಿ ಯಶಸ್ವಿಯಾಗಿದ್ದಾರೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ರಾಜ್ಯದ ಕಾಸರಗೋಡಿನ ಚಟ್ಟಂಚಾಲ ಗ್ರಾಮದ ಅತೀಫ್, ಚೆರ್ಕಳ ಗ್ರಾಮದ ಇಜಾಜ್ ಪಿ.ಎಸ್. ಹಾಗೂ ಕಾಸರಗೋಡಿನ ಚೆಟ್ಟಂಚಾಲ ಗ್ರಾಮದ ನಿವಾಸಿ ಪ್ರಸ್ತುತ ಕುಶಾಲನಗರದ ನಿಸರ್ಗಧಾಮದ ಬಳಿ ಸಲೀಂ ಎಂಬವರ ಸ್ಪೈಸಸ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು 7ನೇ ಹೊಸಕೋಟೆಯಲ್ಲಿ ವಾಸವಿರುವ ಎಂ.ಎಸ್. ಮಹಮದ್ ಫಾಯಿಜ್ ಅಲಿಯಾಸ್ ಪಚ್ಚು ಎಂಬವರನ್ನು ಮಡಿಕೇರಿ ನಗರ ಪೊಲೀಸರು ಬಂಧಿಸಿದ್ದಾರೆ. 

ಅ.15 ರಂದು ಮಡಿಕೇರಿ ನಗರದ ರಾಜಾಸೀಟ್ ಬಳಿ ಕೆಎಲ್-14-ಕ್ಯೂ-3073 ಸಂಖ್ಯೆಯ ಒಂದು ಮಾರುತಿ ಆಲ್ಟೋ 800 ಕಾರಿನಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸುತ್ತಾಡುತ್ತಿದ್ದ ಮೂವರು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಅವರು ಕೇರಳದ ಕಾಸರಗೋಡುವಿನಿಂದ ರಾತ್ರಿ ಸಮಯದಲ್ಲಿ ಕಾರಿನಲ್ಲಿ ಮಡಿಕೇರಿಗೆ ಬಂದು ಮೋಟಾರು ಸೈಕಲ್‍ಗಳನ್ನು ಕಳವು ಮಾಡಿಕೊಂಡು ಕೇರಳ ರಾಜ್ಯಕ್ಕೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿರುವುದು ತಿಳಿದು ಬಂದಿದೆ. ಕಳವು ಮಾಡಲು ಉಪಯೋಗಿಸಿದ ಕಾರು ಹಾಗೂ ಕಳವು ಮಾಡಿರುವ ಮೂರು ಮೋಟಾರು ಸೈಕಲ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

 ಜಿಲ್ಲಾ ಪೊಲೀಸ್ ಉನ್ನತಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಐ.ಪಿ.ಎಸ್ ರವರ ನಿರ್ದೇಶನದಲ್ಲಿ ಮಡಿಕೇರಿ ಉಪ ವಿಭಾಗದ ಡಿವೈಎಸ್ಪಿ ಕೆ.ಎಸ್.ಸುಂದರ್ ರಾಜ್ ಹಾಗೂ ಮಡಿಕೇರಿ ನಗರ ವೃತ್ತ ನಿರೀಕ್ಷಕ ಐ.ಪಿ.ಮೇದಪ್ಪರವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಡಿಕೇರಿ ನಗರ ಠಾಣೆಯ ಪಿ.ಎಸ್.ಐ. ಹೆಚ್.ವೈ. ವೆಂಕಟರಮಣ, ಎಎಸ್‍ಐಗಳಾದ ಕೆ.ಓ.ರಮೇಶ್, ಎಸ್.ಎಸ್. ಶ್ರೀನಿವಾಸ ಮತ್ತು ಸಿಬ್ಬಂದಿಗಳಾದ ಕೆ.ಕೆ.ದಿನೇಶ್, ಎ.ಟಿ.ರಾಘವೇಂದ್ರ, ಕೆ.ಎ.ಉತ್ತಪ್ಪ, ಎಂ.ಆರ್.ಸತೀಶ್, ಕೆ.ಜಿ.ಮಧುಸೂಧನ್, ಬಿ.ಡಿ.ಮುರಳಿ, ಮನೋಜ್ ಕೆ.ಬಿ., ಬಿ.ಕೆ.ಪ್ರವೀಣ್, ಗಿರೀಶ್ ಎಂ,ಎ ಮತ್ತು ಸಿ.ಕೆ.ರಾಜೇಶ್ ಅವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News