×
Ad

ರಸಗೊಬ್ಬರ, ಕೊಳೆತ ಬೆಲ್ಲ, ಸಕ್ಕರೆ ಬಳಸಿ ಬೆಲ್ಲ ತಯಾರಿ!

Update: 2017-10-16 20:14 IST

ಶಿವಮೊಗ್ಗ, ಅ.16: ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡವು, ಇತ್ತೀಚೆಗೆ ಭದ್ರಾವತಿ ತಾಲೂಕಿನ ಅರಳಿಹಳ್ಳಿ ಹಾಗೂ ತಿಪ್ಲಾಪುರ ಗ್ರಾಮದ ಕೆಲ ಆಲೆಮನೆಗಳ ಮೇಲೆ ದಿಢೀರ್ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದ ಸಂದರ್ಭದಲ್ಲಿ ಅತ್ಯಂತ ಗುಪ್ತವಾಗಿ ಕಲಬೆರಕೆ ಬೆಲ್ಲ ತಯಾರಿಸುತ್ತಿರುವ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.

ಈ ವೇಳೆ ರಸಗೊಬ್ಬರ, ಕೊಳೆತ ಬೆಲ್ಲ, ಸಕ್ಕರೆ ಬಳಸಿ ಬೆಲ್ಲ ತಯಾರಿಸುತ್ತಿರುವುದು ಬಯಲಾಗಿದೆ. ಈ ಆಲೆಮನೆಗಳಲ್ಲಿ ಬೆಲ್ಲ ತಯಾರಿಸುವ ವಿಧಾನಕ್ಕೆ ಅಧಿಕಾರಿಗಳ ತಂಡವೇ ತಬ್ಬಿಬ್ಬುಗೊಂಡಿದೆ!

ಆರೋಗ್ಯ ಇಲಾಖೆಯ ಅಧಿಕಾರಿ ಡಾ. ಶಂಕರಪ್ಪ, ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಹಿರಿಯ ಆಹಾರ ರಕ್ಷಣಾಧಿಕಾರಿ ಕೃಷ್ಣಪ್ಪ, ಭದ್ರಾವತಿ ತಾಲೂಕು ಆಹಾರ ರಕ್ಷಣಾ ಧಿಕಾರಿ ಡಾ. ಗುಡದಪ್ಪ ಕಸಬಿ, ಭದ್ರಾವತಿ ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ಸಹಾಯಕ ನೀಲೇಶ್ ಮತ್ತಿತರರು ಈ ದಾಳಿಯಲ್ಲಿ ಭಾಗಿಯಾಗಿದ್ದರು.
ಮಾರಣಾಂತಿಕ ಪರಿಣಾಮ: ಈ ಆಲೆಮನೆಗಳಲ್ಲಿ ಬೆಲ್ಲಕ್ಕೆ ರಸಗೊಬ್ಬರ, ಸೋಡಿಯಂ ಬೈ ಕಾರ್ಬೋನೆಟ್, ಹೈಡ್ರೋ ಸಲ್ಫೇಟ್, ಸಪೋಲೈಟ್‌ನಂತಹ ರಾಸಾಯನಿಕ ವಸ್ತುಗಳ ಮಿಶ್ರಣ ಮಾಡಲಾಗುತ್ತಿತ್ತು. ಬೆಲ್ಲ ಬಿಳಿಯಾಗಿ ಪರಿವರ್ತಿಸುವ ಉದ್ದೇಶದಿಂದ ದಂಧೆಕೋರರು ಈ ರಾಸಾಯನಿಕ ವಸ್ತುಗಳನ್ನು ಬೇಕಾಬಿಟ್ಟಿಯಾಗಿ ಮಿಶ್ರಣ ಮಾಡುತ್ತಿದ್ದರು. ಈ ರಸಗೊಬ್ಬರ ಹಾಗೂ ರಾಸಾಯನಿಕ ವಸ್ತುಗಳು ಮಾನವನ ಆರೋಗ್ಯಕ್ಕೆ ಗಂಡಾಂತರಕಾರಿಯಾದುದಾಗಿವೆ.

‘ಬೆಲ್ಲಕ್ಕೆ ಮಿಶ್ರಣ ಮಾಡುತ್ತಿರುವ ರಾಸಾಯನಿಕ ವಸ್ತುಗಳು ಹತ್ತು ಹಲವು ಮಾರಣಾಂತಿಕ ರೋಗಗಳನ್ನು ಉಂಟು ಮಾಡು ವಂತಾದ್ದಾಗಿವೆ. ಕಿಡ್ನಿ, ಲೀವರ್ ವೈಫಲ್ಯಕ್ಕೂ ಕಾರಣವಾಗುತ್ತವೆ. ಬೆಲ್ಲಕ್ಕೆ ಈ ವಸ್ತುಗಳನ್ನು ಬೇಕಾಬಿಟ್ಟಿಯಾಗಿ ಮಿಶ್ರಣ ಮಾಡು ವುದು ಸಂಪೂರ್ಣ ನಿಷಿದ್ಧ್ದವಾಗಿದೆ. ಇದೆಲ್ಲದರ ಹೊರತಾಗಿಯೂ ಕೇವಲ ಹಣದಾಸೆಗಾಗಿ ಅಪಾಯಕಾರಿ ವಸ್ತುಗಳನ್ನು ಬೇಕಾಬಿಟ್ಟಿಯಾಗಿ ಮಿಶ್ರಣ ಮಾಡುತ್ತಿರುವುದು ನಿಜಕ್ಕೂ ಆತಂಕಕಾರಿ ಸಂಗತಿಯಾಗಿದೆ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೋರ್ವರು ತಿಳಿಸುತ್ತಾರೆ.

ಮರು ತಯಾರಿ: ಇನ್ನೊಂದೆಡೆ ಈ ಆಲೆಮನೆಗಳಲ್ಲಿ ಉಪಯೋಗಕ್ಕೆ ಬಾರದ ಬೆಲ್ಲವನ್ನೇ ಕರಗಿಸಿ, ಇದಕ್ಕೆ ಸಕ್ಕರೆ ಮಿಶ್ರಣ ಮಾಡಿ ಬೆಲ್ಲ ತಯಾರಿಸುತ್ತಿರುವುದು ಅಧಿಕಾರಿಗಳ ದಾಳಿಯ ವೇಳೆ ಬೆಳಕಿಗೆ ಬಂದಿದೆ. ಮಂಡ್ಯ, ಮದ್ದೂರು ಮತ್ತೀತರೆಡೆಯಿಂದ ಕೊಳೆತ ಬೆಲ್ಲ ತರಲಾಗುತ್ತಿದೆ. ಇದಕ್ಕೆ ಸಕ್ಕರೆ, ರಾಸಾಯನಿಕ ಗೊಬ್ಬರ ಮತ್ತಿತರ ವಸ್ತು ಬೆರೆಯಿಸಿ ಬೆಲ್ಲ ತಯಾರಿಸಲಾಗುತ್ತಿದೆ. ಇದು ಕೂಡ ಮಾನವನ ಆರೋಗ್ಯದ ಮೇಲೆ ಪರಿಣಾಮ ಉಂಟು ಮಾಡುವಂತದ್ದಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

ವರದಿ: ಕಳಪೆ ಗುಣಮಟ್ಟದ ಬೆಲ್ಲ ತಯಾರಿಸುವ ಆಲೆ ಮನಗಳ ಬಗ್ಗೆ ಅಧಿಕಾರಿಗಳ ತಂಡವು ಜಿಲ್ಲಾಡಳಿತಕ್ಕೆ ವರದಿ ರವಾನಿಸಿದೆ. ರಸಗೊಬ್ಬರ, ಕೊಳೆತ ಬೆಲ್ಲ, ಸಕ್ಕರೆ ಬಳಸಿ ಬೆಲ್ಲದ ಉಂಡೆ ತಯಾರಿಸಿ ಅಂಗಡಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಈ ಬೆಲ್ಲವು ಸಾರ್ವಜನಿಕರ ಆರೋಗ್ಯಕ್ಕೆ ಮಾರಕವಾಗಿದೆ ಎಂದು ಜಿಲ್ಲಾಡಳಿತಕ್ಕೆ ಸಲ್ಲಿಸಿರುವ ವರದಿ ಯಲ್ಲಿ ಅಧಿಕಾರಿಗಳ ತಂಡವು ತಿಳಿಸಿದೆ. ದಂಧೆಕೋರರು ಸಿಹಿಯ ರೂಪದಲ್ಲಿ ನಾಗರಿಕರ ದೇಹಕ್ಕೆ ವಿಷವುಣಿಸುವ ಕೆಲಸ ನಡೆಸುತ್ತಿದ್ದಾರೆ. ಹಣದಾಸೆಗಾಗಿ ಕಲಬೆರಕೆ ಬೆಲ್ಲ ತಯಾರಿಸಿ ಮಾರುಕಟ್ಟೆಗೆ ರವಾನಿಸುತ್ತಿದ್ದಾರೆ.

ಆರೋಗ್ಯಕ್ಕೆ ಅಪಾಯಕಾರಿ: ಡಾ. ಶಂಕರಪ್ಪ
‘ಇತ್ತೀಚೆಗೆ ಭದ್ರಾವತಿ ತಾಲೂಕಿನ ಅರಳಿಹಳ್ಳಿ ಹಾಗೂ ತಿಪ್ಲಾಪುರ ಗ್ರಾಮದ ಆಲೆಮನೆಗಳ ಮೇಲೆ ದಿಢೀರ್ ದಾಳಿ ನಡೆಸಿದ ವೇಳೆ ಕಲಬೆರಕೆ ಬೆಲ್ಲ ತಯಾರು ಮಾಡುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ರಸಗೊಬ್ಬರ, ಕೊಳೆತ ಬೆಲ್ಲ ಬಳಸಿ ಬೆಲ್ಲ ತಯಾರಿಸುತ್ತಿದ್ದುದು ಕಂಡುಬಂದಿತು. ಆಲೆಮನೆಗಳಲ್ಲಿ ಪತ್ತೆಯಾದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಸವಿವರವಾದ ವರದಿ ಸಲ್ಲಿಸಲಾಗಿದೆ. ರಸಗೊಬ್ಬರ, ಕೊಳೆತ ಬೆಲ್ಲ ಬಳಸಿ ತಯಾರಿಸುವ ಬೆಲ್ಲವು ನಾಗರಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತದೆ’ ಎಂದು ಆರೋಗ್ಯ ಇಲಾಖೆಯ ಜಿಲ್ಲಾ ಸಾಂಕ್ರಾಮಿಕ ಅಧಿಕಾರಿ ಡಾ. ಶಂಕರಪ್ಪತಿಳಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News