ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ‘ದೊಡ್ಡ ದರೋಡೆಕೋರ’: ಆರೋಪ
ಬೆಂಗಳೂರು, ಅ. 16: ‘ರಾಜ್ಯದ ವಿಶ್ವ ವಿದ್ಯಾಲಯಗಳ ಉಪ ಕುಲಪತಿಗಳನ್ನು ‘ಡಕಾಯತರು’ ಎಂದು ಜರೆದಿದ್ದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರೇ 'ದೊಡ್ಡ ದರೋಡೆಕೋರರು' ಎಂದು ವಿಧಾನ ಪರಿಷತ್ ಸದಸ್ಯರು ಗಂಭೀರ ಆರೋಪ ಮಾಡಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಮೇಲ್ಮನೆ ಉಪ ಸಭಾಪತಿ ಮರಿತಿಬ್ಬೇಗೌಡ ಅವರ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿಕ್ಷಣ ಕ್ಷೇತ್ರ ಪ್ರತಿನಿಧಿಸುವ ಮೇಲ್ಮನೆ ಸದಸ್ಯರಾದ ಪುಟ್ಟಣ್ಣ, ಬಸವರಾಜ ಹೊರಟ್ಟಿ, ಶರಣಪ್ಪ ಮಾಟ್ಟೂರು, ಶ್ರೀಕಂಠೇಗೌಡ, ಮರಿತಿಬ್ಬೇಗೌಡ, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕರ್ನಾಟಕ ಮುಕ್ತ ವಿಶ್ವ ವಿದ್ಯಾಲಯ ಮಾನ್ಯತೆ ದೊರಕಿಕೊಡಲು ಕಿಂಚಿತ್ತೂ ಆಸಕ್ತಿ ವಹಿಸದ ರಾಯರೆಡ್ಡಿ, ಅಲ್ಲಿನ ಸಿಬ್ಬಂದಿ ಬೇರೆಡೆಗೆ ವರ್ಗಾವಣೆ ಮಾಡಿ ಯುಜಿಸಿ ಅಧಿಕಾರಿಗಳು ಬಂದಾಗ ಅಲ್ಲಿ ಸಿಬ್ಬಂದಿ ಸೇರಿ ಮೂಲಸೌಲಭ್ಯಗಳಿಲ್ಲ ಎಂಬುದನ್ನು ತೋರಿಸಲು ಮುಂದಾಗಿದ್ದಾರೆ. ಅಲ್ಲದೆ, ಅಲ್ಲಿರುವ 500ಕೋಟಿ ರೂ.ಹಣವನ್ನು ಕೊಳ್ಳೆ ಹೊಡೆಯಲು ಹುನ್ನಾರ ನಡೆಸಿದ್ದಾರೆಂದು ದೂರಿದರು.
ಮುಕ್ತ ವಿವಿ ಮಾನ್ಯತೆಯನ್ನು ಯುಜಿಸಿ ರದ್ದುಪಡಿಸಿದೆ. ಆದರೆ, ಮಾನ್ಯತೆ ನವೀಕರಿಸಲು ಕೋರಿ ಅಗತ್ಯ ದಾಖಲೆಗಳ ಸಹಿತ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲಾಗಿದೆ. ಈ ಮಧ್ಯೆಯೇ ಸಿಎಂ ಸಮಿತಿ ರಚಿಸುತ್ತೇವೆಂದು ಹೇಳಿದ್ದಾರೆ. ಆದರೆ, ಉನ್ನತ ಶಿಕ್ಷಣ ಸಚಿವರು ವಿಶ್ವ ವಿದ್ಯಾಲಯವನ್ನು ಮುಚ್ಚುತ್ತೇವೆ ಎಂದು ಹೇಳಿರುವುದನ್ನು ನೀಡಿದರೆ ಸರಕಾರದ ದ್ವಂದ್ವ ನೀತಿ ಬಹಿರಂಗವಾಗುತ್ತದೆ ಎಂದು ಟೀಕಿಸಿದರು.
ಉನ್ನತ ಶಿಕ್ಷಣದಿಂದ ವಂಚಿತರಾದ ಬಡ-ಮಾಧ್ಯಮ ವರ್ಗದವರಿಗೆ ಮುಕ್ತ ವಿವಿ ಶಿಕ್ಷಣ ನೀಡುತ್ತಿತ್ತು. ಮಾನ್ಯತೆ ರದ್ದುಪಡಿಸಿದ ಹಿನ್ನೆಲೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಕನಸಾಗಿದೆ. ಹೀಗಾಗಿ ಮುಕ್ತ ವಿವಿ ಮಾನ್ಯತೆಗೆ ರಾಜ್ಯ ಸರಕಾರ ಎಲ್ಲ ಪ್ರಯತ್ನ ನಡೆಸಬೇಕು ಎಂದು ಆಗ್ರಹಿಸಿದರು.
ವರ್ಗಾವಣೆ ಮಾಡಿ: ಕಾಲೇಜಿ ಶಿಕ್ಷಣ ಇಲಾಖೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕಾನೂನು ಇಲಾಖೆ ಅಭಿಪ್ರಾಯದ ನೆಪದಲ್ಲಿ ಅಭ್ಯರ್ಥಿಗಳಿಗೆ ಕಿರುಕುಳ ನೀಡುತ್ತಿರುವ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಅಜಯ್ ನಾಗಭೂಷಣ್ ಅವರನ್ನು ಕೂಡಲೇ ಈ ವರ್ಗಾವಣೆ ಮಾಡಿ, ಈ ಬಗ್ಗೆ ವಿಶೇಷ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
‘ಕೇಂದ್ರ ಸಚಿವ ಹಾಗೂ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಅವರಿಗೆ ಕರ್ನಾಟಕ ರಾಜ್ಯದ ಬಗ್ಗೆ ಕನಿಷ್ಠ ಗೌರವ, ನೈತಿಕತೆ ಇದ್ದರೆ ಕೂಡಲೇ ಕರ್ನಾಟಕ ಮುಕ್ತ ವಿಶ್ವ ವಿದ್ಯಾಲಯಕ್ಕೆ ಮಾನ್ಯತೆ ನೀಡಬೇಕಿತ್ತು. ಆದರೆ, ಈ ಬಗ್ಗೆ ಮೌನ ವಹಿಸಿರುವುದು ಅಕ್ಷಮ್ಯ’
-ಪುಟ್ಟಣ್ಣ ಮೇಲ್ಮನೆ ಸದಸ್ಯ
‘ಶಾಸಕರ ಘನತೆಗೆ ಧಕ್ಕೆ ತರುವ ರೀತಿಯಲ್ಲಿ ವಿಧಾನಸೌಧದ ವಜ್ರ ಮಹೋತ್ಸವ ಸಂದರ್ಭದಲ್ಲಿ ಚಿನ್ನದ ಬಿಸ್ಕತ್ ಮತ್ತು ಸಿಬ್ಬಂದಿಗೆ ಬೆಳ್ಳಿಯ ತಟ್ಟೆ ಉಡುಗೊರೆ ನೀಡುವುದು ಸರಿಯಲ್ಲ. ರಾಜ್ಯದ ಜನತೆ ಬರ-ನೆರೆಯಿಂದ ಸಂಕಷ್ಟಕ್ಕೆ ಸಿಲುಕಿರುವಾಗ ದುಂದು ವೆಚ್ಚದ ಅಗತ್ಯವಿಲ್ಲ. ಆ ಹಣವನ್ನು ಬೇರೆ ಜನ ಕಲ್ಯಾಣ ಕಾರ್ಯಕ್ಕೆ ಬಳಸಿ’
-ಬಸವರಾಜ ಹೊರಟ್ಟಿ ವಿಧಾನ ಪರಿಷತ್ ಸದಸ್ಯ