ಕೊಂಡ ಹಾಯುವಾಗ ಅವಘಡ: ಬೆಂಕಿಗೆ ಬಿದ್ದ ಮಹಿಳೆ
Update: 2017-10-16 22:03 IST
ಬೆಂಗಳೂರು, ಅ.16: ಮಾರಮ್ಮನ ಜಾತ್ರೆಯ ವೇಳೆ ಕೊಂಡ ಹಾಯುವಾಗ ಆಕಸ್ಮಿಕವಾಗಿ ಮಹಿಳೆಯೊಬ್ಬರು ಬೆಂಕಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಾಗಲಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಾಗಲಕುಂಟೆಯ ನಿವಾಸಿ ಗೌರಮ್ಮ(49) ಎಂಬುವರು ಗಾಯಗೊಂಡಿರುವ ಮಹಿಳೆ ಎಂದು ತಿಳಿದುಬಂದಿದೆ. ಬಾಗಲಕುಂಟೆ ಟಿ.ದಾಸರಹಳ್ಳಿಯ ಮಾರಮ್ಮನ ಜಾತ್ರೆಯಲ್ಲಿ ಕೊಂಡ ಹಾಯುವಾಗ ಗೌರಮ್ಮ ಏಕಾಏಕಿ ಬೆಂಕಿಯ ಕೆಂಡಕ್ಕೆ ಬಿದ್ದ ಪರಿಣಾಮ, ಕಾಲು, ಕೈ, ಕತ್ತಿನ ಭಾಗಗಳಿಗೆ ತೀವ್ರಗಾಯಗಳಾಗಿವೆ. ಸ್ಥಳೀಯರು ಅವರನ್ನು ರಕ್ಷಣೆ ಮಾಡಿದ್ದು, ಅಂಬೇಡ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.
ಘಟನೆಯಲ್ಲಿ ಗೌರಮ್ಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಬಾಗಲಕುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.