ಇಬ್ಬರು ಕಳ್ಳರ ಬಂಧನ:7 ಲಕ್ಷ ರೂ.ಚಿನ್ನಾಭರಣ ವಶ
ಮಂಡ್ಯ, ಅ.16: ಇಬ್ಬರು ಕಳ್ಳರನ್ನು ಬಂಧಿಸಿರುವ ನಗರ ಕೇಂದ್ರ ಠಾಣೆ ಪೊಲೀಸರು ಅವರಿಂದ ಸುಮಾರು 7 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಚಿಕ್ಕಹಬ್ಬಿಗೆರೆ ಗ್ರಾಮದ ತಿಪ್ಪೇಶ ಆಲಿಯಾಸ್ ಯುವರಾಜ ಹಾಗು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಕೆಂಪನಹಳ್ಳಿ ಗ್ರಾಮದ ಸೈಯದ್ ಭಾಷ ಆಲಿಯಾಸ್ ಭಾಷ ಬಂಧಿತರು.
ಬಂಧಿತರಿಂದ 230 ಗ್ರಾಂ ಚಿನ್ನದ ಆಭರಣಗಳು, 1 ಕೆಜಿ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಎಸ್ಪಿ ಜಿ.ರಾಧಿಕಾರ ತಿಳಿಸಿದರು.
ಮನೆಗೆ ಹಾಕಿದ್ದ ಬೀಗವನ್ನು ಮುರಿದು ಕಳ್ಳತನ ಮಾಡುತ್ತಿದ್ದೆವೆಂದು ಆರೋಪಿಗಳು ವಿಚಾರಣೆ ವೇಳೆ ಹೇಳಿದ್ದಾರೆ. ಇವರ ವಿರುದ್ಧ ಮಂಡ್ಯ, ಶಿವಳ್ಳಿ ಹಾಗು ಗ್ರಾಮಾಂತರ ಠಾಣೆ ಸೇರಿದಂತೆ ದಾವಣಗೆರೆ, ಚಿತ್ರದುರ್ಗ, ತುಮಕೂರು, ಕಾರವಾರ, ಶಿವಮೊಗ್ಗ ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಸುಮಾರು 13 ಪ್ರಕರಣಗಳು ದಾಖಲಾಗಿವೆ ಎಂದು ಅವರು ವಿವರಿಸಿದರು.
ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಆದೇಶಿಸಿದೆ ಎಂದ ಅವರು, ಆರೋಪಿಗಳ ಪತ್ತೆ ಕಾರ್ಯದಲ್ಲಿ ಸಫಲರಾದ ಪೊಲೀಸ್ ಅಧಿಕಾರಿ, ಸಿಬ್ಬಂದಿಯನ್ನು ಅಭಿನಂದಿಸಿದರು.
ಎಎಸ್ಪಿ ಲಾವಣ್ಯ, ಡಿವೈಎಸ್ಪಿ ಚಂದ್ರಶೇಖರ್, ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಸಂತೋಷ್, ಇತರ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.