ಕ್ರೈಸ್ತ ಸಮುದಾಯದ ಕಾಲೋನಿ ಅಭಿವೃದ್ಧಿಗಾಗಿ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ರೂ.2,750 ಕೋಟಿ ಮೀಸಲು : ಐವನ್ ಡಿಸೋಜಾ
ಚಿಕ್ಕಬಳ್ಳಾಪುರ,ಅ.16: ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳು ಸಮರ್ಪಕವಾಗಿ ಬಳಕೆಯಾಗಬೇಕಾದಲ್ಲಿ ಅಲ್ಪಸಂಖ್ಯಾತರಲ್ಲಿ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ ಎಂದು ರಾಜ್ಯ ವಿಧಾನ ಪರಿಷತ್ತಿನ ಸಚೇತಕ ಐವನ್ ಡಿಸೋಜಾ ತಿಳಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಅಲ್ಪಸಂಖ್ಯಾತರಿಗಾಗಿ ಸರ್ಕಾರ ಹಮ್ಮಿಕೊಂಡಿರುವ ನಾನಾ ಯೋಜನೆ ಕುರಿತು ಅರಿವು ಮೂಡಿಸುವ ಹಾಗೂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಈ ಯೋಜನೆಗಳು ಸದ್ಬಳಕೆಯಾಗಬೇಕಿದೆ ಎಂದರು.
ಆದರೆ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಅರಿವಿಲ್ಲದಿರುವುದರ ಬಗ್ಗೆ ವರದಿಯಾಗುತ್ತಿದೆ. ಹಾಗಾಗಿ, ಈ ಕುರಿತು ಪ್ರತಿಯೊಂದು ಜಿಲ್ಲೆಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿದ್ದು, ಅಧಿಕಾರಿಗಳೊಂದಿಗೆ ಸಮುದಾಯದ ಮುಖಂಡರು ಕೈಜೋಡಿಸಿ ಯೋಜನೆ ಹಾಗೂ ಲಭ್ಯವಾಗುವ ಅನುದಾನಗಳ ಬಗ್ಗೆ ಪ್ರಚಾರ ಕೈಗೊಳ್ಳಬೇಕು ಎಂದು ಸೂಚಿಸಿದರು.
ಕ್ರೈಸ್ತ ಸಮುದಾಯದ ಕಾಲೋನಿ ಅಭಿವೃದ್ಧಿಗಾಗಿ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ರೂ.2,750 ಕೋಟಿ ಮೀಸಲಿರಿಸಿದ್ದು, ಈಗಾಗಲೇ ರೂ.300 ಕೋಟಿ ಬಿಡುಗಡೆಯಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಲೋನಿ ಅಭಿವೃದ್ಧಿ ಮಾದರಿಯಲ್ಲೇ ಕ್ರೈಸ್ತ ಸಮುದಾಯದ ಕಾಲೋನಿ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಮುಂದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಬಯಲುಸೀಮೆ ಭಾಗದಲ್ಲಿ ಬೋರ್‍ವೆಲ್ ಕೊರೆಸಲು 2 ಲಕ್ಷ ರೂಗಳ ಬದಲಿಗೆ 5 ಲಕ್ಷ ರೂಗಳನ್ನು ನಿಗಧಿ ಪಡಿಸುವುದು, ಶಾದಿ ಭಾಗ್ಯ ಯೋಜನೆಯಡಿ ಮದುವೆಯ ಒಂದು ಮೊದಲೇ ನೋಂದಾಯಿಸಿಕೊಳ್ಳವ ಬದಲು ಮದುವೆ ನಂತರ ನೋಂದಣಿ ಅವಕಾಶ ಕಲ್ಪಿಸುವುದು, ವಿದ್ಯಾರ್ಥಿ ವೇತನ ಪಡೆಯಲು ಆನ್‍ಲೈನ್‍ನಿಂದ ಉಂಟಾಗುತ್ತಿರುವ ತೊಡಕುಗಳ ನಿವಾರಣೆ, ಕ್ರೈಸ್ತ ಸಮುದಾಯದವರಿಗೆ ಸ್ಮಶಾನಗಳಿಗೆ ಮುಖಂಡರು ಜಮೀನು ಮಂಜೂರು ಮಾಡುವುದು ಸೇರಿದಂತೆ ಹಲವು ಸಮಸ್ಯೆಗಳ ಬಗೆಹರಿಸುವಂತೆ ಡಿಸೋಜಾ ಅವರಲ್ಲಿ ಸಮುದಾಯದ ಮುಖಂಡರು ಮನವಿ ಮಾಡಿದರು.
ಸಮಸ್ಯೆಗಳನ್ನು ಆಲಿಸಿದ ವಿಧಾನ ಪರಿಷತ್ತಿನ ಸಚೇತಕ ಐವನ್ ಡಿಸೋಜಾ ಮುಂಬರುವ ಸಭೆಯಲ್ಲಿ ಈ ಕುರಿತು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಜಿಪಂ ಅಧ್ಯಕ್ಷ ಪಿ.ಎನ್ ಕೇಶವರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ.ಅನುರಾಧ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಜಗದೀಶ್ ಗಂಗಣ್ಣನವರ್, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿರ್ದೇಶಕರಾದ ಚಿನ್ನಪ್ಪ, ಬಾಲರಾಜ್, ವಿಲಿಯಂ ಪ್ರತಾಪ ಮತ್ತಿತರರು ಭಾಗವಹಿಸಿದ್ದರು.