ದಲಿತ, ಹೋರಾಟಗಾರರ ಹತ್ತಿಕ್ಕಲು ರೌಡಿ ಶೀಟರ್ ಕೇಸ್ : ಕುಂದು ಕೊರತೆ ಸಭೆಯಲ್ಲಿ ದಲಿತ ಮುಖಂಡರ ಆರೋಪ
ನಾಗಮಂಗಲ, ಅ.16: ದಲಿತರಿಗೆ ಸ್ಮಶಾನವಿಲ್ಲ, ದೇವಸ್ಥಾನಗಳಿಗೆ ಪ್ರವೇಶವಿಲ್ಲ, ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಮತ್ತು ರೋಗಿಗಳಿಂದ ಹಣ ವಸೂಲಿ, ದಲಿತಪರ ಹೋರಾಟಗಾರರು ಮತ್ತು ಪತ್ರಕರ್ತರ ಮೇಲೆ ರೌಡಿ ಶೀಟರ್ ಕೇಸ್ ಹಾಕಲಾಗಿದೆ ಎಂದು ಸೋಮವಾರ ಮಿನಿವಿಧಾನಸೌಧದಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ದಲಿತರ ಕುಂದುಕೊರತೆ ಸಭೆಯ್ಲಲಿ ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಪೊಲೀಸ್ ಠಾಣೆಗಳಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯ ದಬ್ಬಾಳಿಕೆಗಳನ್ನು ಪ್ರಶ್ನಿಸುವ ದಲಿತ ಹೋರಾಟಗಾರರು ಹಾಗು ಕೆಲವು ಪತ್ರಕರ್ತರ ವಿರುದ್ಧ ರೌಡಿ ಶೀಟ್ ಕೇಸ್ ಹಾಕಿ ಹೋರಾಟ ಹತ್ತಿಕ್ಕಲಾಗುತ್ತಿದೆ ಎಂದು ತೊಳಲಿ ಕೃಷ್ಣಮೂರ್ತಿ, ಆಟೋ ಶಿವಣ್ಣ, ವೆಂಕಟೇಶ್, ಕಂಚಿನಕೋಟೆ ಮೂರ್ತಿ ಇನ್ನಿತರರು ಆರೋಪಿಸಿದರು. ಸಭೆಗೆ ಪೊಲೀಸ್ ಅಧಿಕಾರಿಗಳ ಗೈರನ್ನು ಖಂಡಿಸಿದರು.
ತಹಶೀಲ್ದಾರ್ ಶಿವಣ್ಣ ಪ್ರತಿಕ್ರಿಯಿಸಿ, ರೌಡಿ ಶೀಟ್ ಹಾಕುವುದು ಪೊಲೀಸ್ ಇಲಾಖೆಯ ವ್ಯಾಪ್ತಿಗೆ ಬರುತ್ತದೆ, ಯಾವ ಕಾರಣಗಳಿಗೆ ಈ ಕೇಸ್ ಹಾಕಲಾಗಿದೆ ಎಂಬ ಬಗ್ಗೆ ಚರ್ಚಿಸಲು ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ಕರೆಯಲಾಗುವುದು. ಸಭೆ ದಿನಾಂಕವನ್ನು ತಿಳಿಸಲಾಗುವುದು ಎಂದರು.
ಆಸ್ಪತ್ರೆಯಲ್ಲಿ ಹಣವಸೂಲಿ:
ಪಟ್ಟಣದ ಜನರಲ್ ಆಸ್ಪತ್ರೆ, ಬೆಳ್ಳೂರು ಆಸ್ಪತ್ರೆ, ಬಿಂಡಿಗನವಿಲೆ ಆಸ್ಪತ್ರೆಗಳಲ್ಲಿ ಜನರಿಗೆ ಸೂಕ್ತ ಚಿಕಿತ್ಸೆದೊರೆಯುತ್ತಿಲ್ಲ, ಸ್ವಚ್ಚತಾ ಕಾರ್ಮಿಕರನ್ನು ಹೆದರಿಸಿ ಅರ್ಧವೇತನ ಲಪಟಾಯಿಸಲಾಗುತ್ತಿದೆ ಹಾಗು ಚಿಕಿತ್ಸೆಗೆ ಬರುವ ಜನರಿಂದ ವೈದ್ಯರು ಹಣ ಪಡೆದುಕೊಳ್ಳಲಾಗುತ್ತಿದೆ ಎಂಬ ಅರೋಪಕ್ಕೆ ಟಿಹೆಚ್‍ಓ ಧನಂಜಯ, ಜನರಲ್ ಆಸ್ಪತ್ರೆಯಲ್ಲಿ ವೈದ್ಯರ ಕೊರೆತೆ ಇದೆ. ಕಟ್ಟಡ ದುರಸ್ತಿ ನಡೆಯುತ್ತಿದೆ. ಜನರೇ ವೈದ್ಯರಿಗೆ ಬಲವಂತವಿಲ್ಲದಿದ್ದರೂ ಇಚ್ಚೆಪಟ್ಟು ಹಣ ನೀಡುತ್ತಿರಬಹುದು, ಇನ್ನೂ ಕಾರ್ಮಿಕರಿಗೆ ಗುತ್ತಿಗೆದಾರರು ಹಣವಂಚಿಸುತ್ತಿದ್ದರೆ ಪರಿಶೀಲನೆ ನಡೆಸಿ ಕ್ರಮವಹಿಸಲಾಗುವುದು ಎಂದು ಉತ್ತರಿಸಿದರು.
ತಾಲೂಕಿನ ಗಂಗವಾಡಿ, ಬಿದರಕೆರೆ ಸೇರಿದಂತೆ ಬಹುತೇಕ ಮುಜರಾಯಿ ದೇವಸ್ಥಾನಗಳಿಗೆ ಇಂದಿಗೂ ದಲಿತರ ಪ್ರವೇಶ ನಿರಾಕರಿಸಲಾಗುತ್ತಿದೆ, ಹಾಕಿರುವ ನಾಮಫಲಕವನ್ನು ಕಿತ್ತೆಸೆದಿರುವುದಲ್ಲದೆ ಕೆಲವು ಕಡೆ ಬೋರ್ಡ್‍ಗೆ ಬಣ್ಣ ಬಳಿಯಲಾಗಿದೆ. ತಾಲೂಕು ಆಡಳಿತ ಈ ಬಗ್ಗೆ ನಿರ್ಲಕ್ಷವಹಿಸಿದೆ. ದಲಿತರಿಗೆ ಸ್ಮಶಾನವಿಲ್ಲ, ಬಿದರಕೆರೆಯಲ್ಲಿ ಬಿಗಡಾಯಿಸಿದ ಸಮಸ್ಯೆಯನ್ನು ತಹಶೀಲ್ದಾರರೇ ಬಂದು ಪರೀಶೀಲನೆ ಮಾಡಿದ್ದರೂ ಇನ್ನೂ ಬಗೆಹರಿಸಿಲ್ಲ. ಬಹುತೇಕ ಗ್ರಾಮಗಳಲ್ಲಿ ದಲಿತರ ಈ ಸಮಸ್ಯೆ ಮತ್ತಷ್ಟು ಕೆಟ್ಟದಾಗಿದೆ ಎಂದು ಮುಖಂಡರು ದೂರಿದರು. ದಲಿತರ ಸ್ಮಶಾನ ಮತ್ತು ದೇವಾಲಯಳಿಗೆ ಸಾರ್ವಜನಿಕರ ಸ್ಥಳವೆಂದು ನಾಮಫಲಕ ಅಳವಡಿಸಲಾಗುವುದು ಎಂದು ತಹಸೀಲ್ದಾರ್ ಶಿವಣ್ಣ ತಿಳಿಸಿದರು.
ಸಿ.ಬಿ.ನಂಜುಂಡಪ್ಪ, ಬೆಟ್ಟದ ಮಲ್ಲೇನಹಳ್ಳಿ ರಮೇಶ್, ಭೀಮನಹಳ್ಳಿ ನಾಗರಾಜು, ಪುಟ್ಟಸ್ವಾಮಿ, ಚಲುವಯ್ಯ ಇತರ ಮುಖಂಡರು, ಪ್ರಭಾರ ಇಓ ಶಾಂತ, ಸಮಾಜಕಲ್ಯಾಣಾಧಿಕಾರಿ ಇನ್ನಿತರೆ ಅಧಿಕಾರಿಗಳು ಇದ್ದರು.