ಕಾರ್ಯಕರ್ತರ ಅಭಿಪ್ರಾಯವೇ ಅಂತಿಮ:ಯೋಗೇಶ್ವರ್
ಮದ್ದೂರು, ಅ.16: ಯಾವುದೇ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮುನ್ನ ಕಾರ್ಯಕರ್ತರ ಹಾಗು ಚಿಂತಕರ ಸಭೆ ಕರೆದು ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಚನ್ನಪಟ್ಟಣದ ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ.
ತಾಲೂಕಿನ ಗಡಿಭಾಗದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಬಂಧ ನ.22ರಂದು ಕಾರ್ಯಕರ್ತರ ಸಭೆ ಕರೆಯುತ್ತೇನೆ. ಅಲ್ಲಿ ಕಾರ್ಯಕರ್ತರು ಯಾವ ತಿರ್ಮಾನ ತೆಗೆದುಕೊಳ್ಳುತ್ತಾರೋ ಅದೇ ಅಂತಿಮ ಎಂದರು.
ನನ್ನನ್ನು ಹೊರತುಪಡಿಸಿ ನಮ್ಮ ಕುಟುಂಬದ ಸದಸ್ಯರು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ನಾನು ಕುಟುಂಬ ರಾಜಕಾರಣ ಮಾಡುವುದಿಲ್ಲ ಎಂದು ಅವರು ಹೇಳಿದರು.
ಮುಂಬರುವ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಿಂದಲೇ ಸ್ಪರ್ಧಿಸಲು ಯೋಜಿಸಿದ್ದೇನೆ. ಅದು ಸಾಧ್ಯವಾಗದಿದ್ದಲ್ಲಿ ನನ್ನ ಬೆಂಬಲಿಗರೊಬ್ಬರನ್ನು ಕಣಕ್ಕಿಳಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತಾಪಂ ಸದಸ್ಯ ತೈಲೂರು ಸಿ.ಚಲುವರಾಜು. ರಾಜಣ್ಣ, ಕಾರ್ತಿಕ್, ನಂದೀಶ್, ಭರತ್, ಸಿದ್ದು ಇನ್ನಿತರರು ಗೋಷ್ಠಿಯಲ್ಲಿದ್ದರು.