×
Ad

ಭೂ ಸ್ವಾಧೀನಕ್ಕೂ ಮುನ್ನ ಪರಿಹಾರ ನಿಗಧಿಗೆ ಸಂತ್ರಸ್ಥರ ಒತ್ತಾಯ

Update: 2017-10-16 23:12 IST

ತುಮಕೂರು, ಅ.16:ರಾಷ್ಟ್ರೀಯ ಹೆದ್ದಾರಿ 206 ರಸ್ತೆ ಅಗಲೀಕರಣಕ್ಕೆ ಸ್ವಾಧೀನ ಪಡಿಸಕೊಳ್ಳುವ ರೈತರ ಭೂಮಿ ಪರಿಹಾರ ಧನ ಘೊಷಣೆ, ಮತ್ತು ಭೂಸ್ವಾಧೀನ ಕಚೇರಿಗಳನ್ನು ತಾಲೂಕ ಮಟ್ಟದಲ್ಲಿ ತೆರೆಯುವಂತೆ ಆಗ್ರಹಿಸಿ ಇಂದು ರೈತ-ಕೃಷಿಕಾರ್ಮಿಕ ಸಂಘಟನೆ (ಆರ್‍ಕೆಎಸ್) ಹಾಗೂ ರಾಷ್ಟ್ರೀಯ ಹೆದ್ದಾರಿ 206 ಸಂತ್ರಸ್ಥರ ಹೋರಾಟ ಸಮಿತಿಗಳ ವತಿಯಿಂದ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಪ್ರತಿಭಟನೆ ನಡೆಸಲಾಯಿತು.

ನಗರದ ಟೌನ್‍ಹಾಲ್‍ನಿಂದ ಜಿಲ್ಲಾಧಿಕರಿಗಳ ಕಚೇರಿಯವರೆಗೆ ರೈತರು ‘ಭೂಮಿಯು ನಮ್ಮದೆ, ಬೆಲೆಯೂ ನಮ್ಮದೆ’ ಎಂಬ ಘೋಷ ವಾಕ್ಯದೊಂದಿಗೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಪ್ರತಿಭಟನಾಕಾರರನ್ನು ಉದ್ದೇಶಿಸಿ ಮನೆಯನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ಹೆದ್ದಾರಿ 206 ಸಂತ್ರಸ್ಥರ ಹೋರಾಟ ಸಮಿತಿ ಸಂಚಾಲಕ ಎಸ್.ಎನ್.ಸ್ವಾಮಿ,ರಸ್ತೆಗಾಗಿ  ಭೂಮಿ ಕಳೆದುಕೊಳ್ಳುವ ರೈತರಿಗೆ ಸೂಕ್ತ ಪರಿಹಾರ ನೀಡದ ಹೊರತು, ಯಾವುದೇ ಕಾರಣಕ್ಕೆ ಭೂಸ್ವಾಧಿನಕ್ಕೆ ಅವಕಾಶ ನೀಡುವುದಿಲ್ಲ.ರೈತರು ಕೇವಲ ಭೂಮಿಯನ್ನು ಮಾತ್ರ ಕಳೆದುಕೊಳ್ಳುತ್ತಿಲ್ಲ. ತಮ್ಮ ತಲೆಮಾರುಗಳ ಜೀವನಾಧಾರ, ಆದಾಯದ ಮೂಲ, ಸರ್ವಸ್ವವನ್ನೂ ಕಳೆದುಕೊಳ್ಳುತ್ತಿದ್ದಾರೆ. ಅಂತಹ ರೈತರಿಗೆ ಬಿಡಿಗಾಸಿನ ಪರಿಹಾರ ನೀಡಿ ಸರಕಾರಗಳು ಕೈತೊಳೆದುಕೊಳ್ಳುತ್ತಿವೆ.ಈ ರಸ್ತೆ ನಿರ್ಮಾಣವಾಗುತ್ತಿರುವುದು ಕೇವಲ ಬಂಡವಾಳಿಗರ ಹಿತಾಸಕ್ತಿ ಕಾಪಾಡಲೇ ವಿನಃ, ಸಾರ್ವಜನಿಕರ ಅನುಕೂಲಕ್ಕಾಗಿ ಅಲ್ಲ.

ನಾಳೆ ನಮ್ಮ ಹೊಲದ ಮೇಲೆ ನಿರ್ಮಾಣವಾಗುವ ರಸ್ತೆಗೆ ನಾವೇ ಟೋಲ್ ಕೊಟ್ಟು ಸಂಚರಿಸಬೇಕು.ಖಾಸಗೀ ಕಂಪನಿಗಳ ಮಾಲೀಕರು ಇದರಿಂದ ಕೋಟಿಗಟ್ಟಲೇ ಹಣ ಗಳಿಸುತ್ತಾರೆ.ಆದರೆ ಭೂಮಿ ನೀಡಿದ ಅನ್ನಾದಾತರು ಬೀದಿಗೆ ಬೀಳಲಿದ್ದಾರೆ.ಹೀಗಾಗಿ ಭೂಮಿ ಕಳೆದುಕೊಳ್ಳುವ ರೈತರು ಮತ್ತೆ ಗೌರವಯುತವಾಗಿ ಜೀವನ ಕಟ್ಟಿಕೊಳ್ಳಲು ಸಾಕಾಗುವಷ್ಟು ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. 

ರÉೈತ-ಕೃಷಿಕಾರ್ಮಿಕ ಸಂಘಟನೆ ರಾಜ್ಯ ಸಮಿತಿ ಸದಸ್ಯ ಸಿ.ಆನಂದ ಮಾತನಾಡಿ,ಇಂದಿನ ಸರಕಾರಗಳು ಬಂಡವಾಳಿಗರ-ಕಂಪನಿ, ಮಾಲೀಕರ ಪರವಾದ ನೀತಿಗಳನ್ನು ಜಾರಿಗೆ ತರುತ್ತಿದ್ದು,ಇವು ರೈತ-ಕಾರ್ಮಿಕರ ವಿರೋಧಿಯಾಗಿವೆ.ಜೊತೆಗೆ, ಭೂ ಸ್ವಾಧೀನದ ಬಗ್ಗೆ ಗೊಂದಲದಲ್ಲಿರುವ ರೈತರಿಗೆ ತಮ್ಮ ಜಮೀನಿನಲ್ಲಿ ಬೆಳೆ ಬೆಳೆಯಲು ಸರಿಯಾದ ನಿರ್ಧಾರ ತೆಗೆದುಕೊಳ್ಳಲಾಗದೆ,ಅತ್ತ ಪರಿಹಾರವೂ ಇಲ್ಲ, ಇತ್ತ ಬೆಳೆಯೂ ಇಲ್ಲ ಎನ್ನುವ ಅತಂತ್ರ ಸ್ಥಿತಿ ಬಂದೊದಗಿದೆ.ಆದ್ದರಿಂದ ಇಂತಹ ರೈತರ ವಿರೋಧಿ, ಜನ ವಿರೋಧಿ ನೀತಿಗಳ ವಿರುದ್ಧ ರೈತರು ಸಂಘಟಿತರಾಗಿ ಹೋರಾಡಬೇಕು ಎಂದು ಕರೆ ನೀಡಿದರು. 

ರಾಷ್ಟ್ರೀಯ ಹೆದ್ದಾರಿ 206 ಸಂತ್ರಸ್ಥರ ಹೋರಾಟ ಸಮಿತಿ ತಿಪಟೂರು ಸಂಚಾಲಕ ಬೈರನಾಯಕನ ಹಳ್ಳಿ ಬಿ.ಲೋಕೇಶ್, ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯ ತಿಮ್ಲಾಪುರ ದೇವರಾಜ್ ಮಾತನಾಡಿದರು.

ಮನವಿ ಸ್ವಿಕರಿಸಿದ ಅಪರ ಜಿಲ್ಲಾಧಿಕಾರಿ ಸಿ.ಅನಿತಾ ಮಾತನಾಡಿ,ಒಂದು ವಾರದಲ್ಲಿ ಯೋಜನೆ ಬಗ್ಗೆ ಎಲ್ಲಾ ಮಾಹಿತಿ ತರಿಸಿಕೊಡುವುದಾಗಿಯೂ, ಭೂಸ್ವಾಧೀನ ಅಧಿಕಾರಿಗಳ ಕಚೇರಿ ಜಿಲ್ಲಾ ಮಟ್ಟದಲ್ಲಿ ತೆರೆಯಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚಿಸುವುದಾಗಿಯೂ,ಭೂಸ್ವಾಧಿನ ಪರಿಹಾರ ಸಂಬಂಧ ಜಿಲ್ಲಾಧಿಕಾರಿಗಳು ಬಂದ ನಂತರ ಚರ್ಚಿಸಿ ತಿಳಿಸಲಾಗುವುದು ಎಂದು ಪ್ರತಿಭಟನಾ ನಿರತರಿಗೆ ಭರವಸೆ ನೀಡಿದರು. 

ಪ್ರತಿಭಟನೆಯಲ್ಲಿ ತಿಪಟೂರಿನ ಮಾದಿಹಳ್ಳಿ,ಈಡೇನಹಳ್ಳಿ, ಹಳೇಪಾಳ್ಯ, ಬೈರನಾಯಕನಹಳ್ಳಿ, ಶೆಟ್ಟಿಹಳ್ಳಿ, ಜಯಂತಿ ಗ್ರಾಮ, ಕಲ್ಲೇಗೌಡನ ಪಾಳ್ಯ, ಕರಡಿ, ತಿಮ್ಲಾಪುರು, ಚೌಡ್ಲಾಪುರ  ಹಾಗೂ ಗುಬ್ಬಿ ತಾಲೂಕಿನ ಸಿಂಗೋನಹಳ್ಳಿ, ಹರಿವೇಸಂದ್ರ, ಎನ್.ಮತ್ತಿಘಟ್ಟ, ಕಳ್ಳಿಪಾಳ್ಯ, ಚೆನ್ನೇನಹಳ್ಳಿ, ಮುಂತಾದ ಗ್ರಾಮಗಳ ನೂರಾರು ರೈತರು ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News