ರೌಡಿ ಶೀಟರ್ ಬುಳ್ಳ ನಾಗನ ಹತ್ಯೆಗೆ ಯತ್ನ: ಏಳು ಸುಪಾರಿ ಕಿಲ್ಲರ್‍ಗಳ ಬಂಧನ

Update: 2017-10-17 13:32 GMT

ದಾವಣಗೆರೆ, ಅ.17: ರೌಡಿ ಶೀಟರ್ ಬುಳ್ಳ ನಾಗನ ಹತ್ಯೆ ಮಾಡಲು ಬೆಂಗಳೂರಿನಿಂದ ಬಂದಿದ್ದ 7 ಸುಪಾರಿ ಕಿಲ್ಲರ್‍ಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ  ಡಾ.ಭೀಮಾಶಂಕರ್ ಗುಳೇದ್ ಮಂಗಳವಾರ ತಿಳಿಸಿದ್ದಾರೆ.

ಯುವರಾಜ ಅಲಿಯಾಸ್ ಪಾಪು (28), ಹರೀಶ್ (19) ಶರತ್(20), ಮಂಜುನಾಥ್(20), ಹರೀಶ್(19) ಪ್ರಕಾಶ್ (19) ಮತ್ತು ಜಯಂತ್ ಅಲಿಯಾಸ್ ಪಾಂಡು (20) ಬಂಧಿತ ಆರೋಪಿಗಳಾಗಿದ್ದು, ಇವರಿಂದ ಮಚ್ಚು, ಕಾರದ ಪುಡಿ, ಹಗ್ಗ, 5 ಮೊಬೈಲ್, ಮಾರುತಿ ಒಮಿನಿ ವ್ಯಾನ್ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಕಳೆದ ನಾಲ್ಕು ದಿನಗಳ ಹಿಂದೆ ನಗರದಲ್ಲಿ ಠಿಕಾಣಿ ಹೂಡಿದ್ದ ಹಂತಕರ ತಂಡ ಸೋಮವಾರ ರಾತ್ರಿ ಎಸ್‍ಎಸ್ ಹೈಟೆಕ್ ಆಸ್ಪತ್ರೆಯ ಬಸವರಾಜ್ ಡಾಬಾ ಹಿಂಭಾಗದಲ್ಲಿ ಹೊಂಚು ಹಾಕುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ಕೆಟಿಜೆ ನಗರ ಠಾಣಾ ಪಿಎಸ್ಸೈ ರಾಜು ಮತ್ತು ಸಿಬ್ಬಂದಿ ದಾಳಿ ನಡೆಸಿ ಎಲ್ಲ 7 ಜನರನ್ನು ವಶಕ್ಕೆ ಪಡೆದು ವಿಚಾರಣೆಗೆ ಗುರಿಪಡಿಸಿದಾಗ ಬುಳ್‍ ನಾಗನ ಹತ್ಯೆಗೆ ಸುಪಾರಿ ಪಡೆದಿರುವುದು ಬೆಳಕಿಗೆ ಬಂದಿದೆ ಎಂದರು.

ನಗರದ ಕುಣ್ವ, ಕೃಷ್ಣಪ್ಪ, ಚಿರು, ದಾದಾಪೀರ್, ತಿಲಕ್ ನಾಯ್ಕ್, ಗೋವಿಂಗ್ ಅವರ ನಿರ್ದೇಶನದಂತೆ  ಬುಳ್‍ನಾಗನನ್ನು ಹತ್ಯೆ ಮಾಡಿ ಆತನ ಬಳಿ ಇರುವ ಹಣ ದೋಚಿಕೊಂಡು ಪರಾರಿಯಾಗುವುದು ಈ ತಂಡದ ಉದ್ದೇಶ. ಆದರೆ ಪೊಲೀಸರ ಸಕಾಲಿಕ ಕ್ರಮದಿಂದ ನಗರದಲ್ಲಿ ನಡೆಯಬೇಕಿದ್ದ ಗ್ಯಾಂಗ್‍ ವಾರ್ ತಪ್ಪಿದಂತಾಗಿದೆ. ಇದೀಗ ಬಂಧನಕ್ಕೊಳಗಾಗಿರುವ ಹಂತಕರ ತಂಡದ ಮುಖ್ಯ ಆರೋಪಿ ಯುವರಾಜ ಅಲಿಯಾಸ್ ಪಾಪು ವಿರುದ್ಧ ಬೆಂಗಳೂರಿನ ವಿವಿಧ ಠಾಣೆಯಲ್ಲಿ ಕೊಲೆ, ಕೊಲೆ ಯತ್ನ ಮತ್ತು ದರೋಡೆಗೆ ಸಂಬಂಧಿಸಿದಂತೆ ಒಟ್ಟು 5 ಪ್ರಕರಣಗಳು ದಾಖಲಾಗಿದ್ದು, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ ಎಂದು ವಿವರಿಸಿದರು.

ನಗರದಲ್ಲಿ 1340 ಜನರ ವಿರುದ್ಧ ರೌಡಿಶೀಟ್ ದಾಖಲಾಗಿದೆ. ಈ ಪೈಕಿ ಇತ್ತೀಚೆಗೆ 700 ಮರಿ ರೌಡಿಗಳು ಕೂಡ ಈ ಪಟ್ಟಿಯಲ್ಲಿ ಸೇರಿದ್ದಾರೆ. ನಗರ ಅಥವಾ ಜಿಲ್ಲೆಯಲ್ಲಿ ಯಾವುದೇ ರೌಡಿ ಚಟುವಟಿಕೆಗಳಿಗೆ ಪೊಲೀಸ್ ಇಲಾಖೆ ಅವಕಾಶ ನೀಡುವುದಿಲ್ಲ. ಒಂದು ವೇಳೆ ಅಂಥಹ ಚಟುವಟಿಕೆಗಳು ತಲೆ ಎತ್ತುವುದು ಕಂಡು ಬಂದರೆ ಇಲಾಖೆ ಪೊಲೀಸ್ ಇಲಾಖೆ ಕೈಗೊಳ್ಳಬಹುದಾದ ಎಲ್ಲ ಕ್ರಮಗಳನ್ನು ಜರಗಿಸಲಿದೆ ಎಂದು ಹೇಳಿದರು.

ಬುಳ್‍ನಾಗನನ್ನು ಹತ್ಯೆ ಮಾಡಿದರೆ ಬೆಂಗಳೂರಿನಲ್ಲಿ ಕ್ಲಬ್ ಬಿಸಿನೆಸ್ ಮಾಡಿಕೊಡುವುದಾಗಿ ಆಮಿಷ ವೊಡ್ಡಲಾಗಿತ್ತು. ಈ ಹಿನ್ನೆಲೆಯಲ್ಲಿ ಹಂತಕರ ತಂಡ ದಾವಣಗೆರೆಗೆ ಕೃತ್ಯ ಎಸಗಲು ಬಂದಿತ್ತು .ಈ ತಂಡವನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಿದ ನಮ್ಮ ಸಿಬ್ಬಂದಿಯ ಸೇವೆ ಶ್ಲಾಘನೀಯ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಿವೈಎಸ್ಪಿ ಎಂ.ಬಾಬು, ಪಿಎಸ್ಸೈ ರಾಜು, ಪ್ರೊಬೇಷನರಿ ಪಿಎಸ್ಸೈ ಪಾರ್ವತಿ ಬಾಯಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News