ಶಿಕಾರಿಪುರ: ಕುವೆಂಪು ವಿವಿ ವಿರುದ್ಧ ಎಬಿವಿಪಿ ಧರಣಿ

Update: 2017-10-17 17:03 GMT

ಶಿಕಾರಿಪುರ, ಅ.17: ಶಿಕ್ಷಣದ ಬಗ್ಗೆ ಸರ್ಕಾರದ ನಿರ್ಲಕ್ಷ್ಯದಿಂದ ಕಾಲೇಜು ಆರಂಭಗೊಂಡು ಕೆಲವೇ ದಿನಗಳಾಗಿದ್ದು, ಇದೀಗ ಆತುರಾತುರವಾಗಿ ಪರೀಕ್ಷೆಯನ್ನು ಮುಂಚಿತವಾಗಿ ನಡೆಸಲು ಕುವೆಂಪು ವಿವಿ ವೇಳಾಪಟ್ಟಿಯನ್ನು ಪ್ರಕಟಿಸಿ ಪುನಃ ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದೆ ಎಂದು ಎಬಿವಿಪಿ ಜಿಲ್ಲಾ ಸಂಚಾಲಕ ಪ್ರವೀಣ್ ಬೆಣ್ಣೆ ಆರೋಪಿಸಿದ್ದಾರೆ.

ಮಂಗಳವಾರ ಎಬಿವಿಪಿ ನೇತೃತ್ವದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪರೀಕ್ಷೆಯ ವೇಳಾಪಟ್ಟಿಯನ್ನು ಬದಲಾಯಿಸುವಂತೆ ಆಗ್ರಹಿಸಿ ನಡೆಸಿದ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅತಿಥಿ ಉಪನ್ಯಾಸಕರ ನೇಮಕಾತಿಯ ವಿಳಂಬದಿಂದಾಗಿ ಹಾಗೂ ಖಾಯಂ ಉಪನ್ಯಾಸಕರ ವರ್ಗಾವಣೆ ಪ್ರಕ್ರಿಯೆಯಿಂದಾಗಿ ಕಳೆದ ಕೆಲ ತಿಂಗಳಿನಿಂದ ಕಾಲೇಜಿನಲ್ಲಿ ತರಗತಿ ಆರಂಭ ಅತ್ಯಂತ ತಡವಾಗಿದೆ ಎಂದ ಅವರು, ಸರ್ಕಾರದ ಲೋಪದಿಂದಾಗಿ ಪಠ್ಯದಲ್ಲಿ ವಿದ್ಯಾರ್ಥಿಗಳ ಪ್ರಗತಿ ಕುಂಠಿತವಾಗುತ್ತಿದೆ ಎಂದು ದೂರಿದರು.

ಪ್ರತಿಬಾರಿ ಪರೀಕ್ಷೆಗಳು ನವೆಂಬರ್ ತಿಂಗಳಿನಲ್ಲಿ ಆರಂಭವಾಗಲಿದ್ದು, ಇದೀಗ ಕುವೆಂಪು ವಿವಿ ಅಕ್ಟೋಬರ್ ನಲ್ಲಿ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿ ವಿದ್ಯಾರ್ಥಿಗಳನ್ನು ಸಂಕಟಕ್ಕೆ ಸಿಲುಕಿಸಿದೆ ಎಂದ ಅವರು, ಹಲವು ಲೋಪದಿಂದಾಗಿ ವೇಳಾಪಟ್ಟಿಯನ್ನು ನಿಗದಿತ ಸಮಯಕ್ಕಿಂತ ತಡವಾಗಿ ಪ್ರಕಟಿಸಬೇಕಾದ ವಿವಿ ಈ ಬಾರಿ ಮುಂಚಿತವಾಗಿ ಪ್ರಕಟಿಸಿ ವಿದ್ಯಾರ್ಥಿಗಳ ಭವಿಷ್ಯದ ಜತೆ ಚಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು.

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಕೂಡಲೇ ಪರೀಕ್ಷೆಯ ವೇಳಾಪಟ್ಟಿಯನ್ನು ಬದಲಾಯಿಸಿ ಮುಂದೂಡುವಂತೆ ಅವರು ಆಗ್ರಹಿಸಿದರು.

ಬಳಿಕ ಪ್ರಾಚಾರ್ಯರ ಮೂಲಕ ವಿವಿ ಕುಲಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಬದಲ್ಲಿ ವಿದ್ಯಾರ್ಥಿ ಮುಖಂಡ ಪವನ್, ರಾಕೇಶ್ ರಾಥೋಡ್, ಸೋಮು, ಆರ್ಶದ್, ಸುಮಂತ, ಕಲಾವತಿ, ಸುಷ್ಮಿತಾ, ರಜತ್, ದಿವ್ಯಾ, ಪೂಜಾ, ಸುಪ್ರಿತಾ, ಉಷಾ, ತನುಜಾ, ರಾಧಿಕಾ, ಪ್ರಿಯಾಂಕ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News