ಸವಿತಾ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಒತ್ತಾಯಿಸಿ ಧರಣಿ

Update: 2017-10-17 17:19 GMT

ಮೈಸೂರು, ಅ.17: 2018-19ನೆ ಸಾಲಿನ ಬಜೆಟ್ ನಲ್ಲಿ ಸವಿತಾ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಘೋಷಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸವಿತಾ ಸಮಾಜ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಧರಣಿ ನಡೆಸಲಾಯಿತು.

ಈ ವೇಳೆ ಧರಣಿನಿರತರರು ಮಾತನಾಡಿ, ಶತಮಾನಗಳಿಂದ ಸಾಮಾಜಿಕ ಜೀವನದಲ್ಲಿ ಸಾರ್ವಜನಿಕ ಸೇವೆ ಮಾಡಿಕೊಂಡು ಬಂದಿರುವುದರಿಂದ ಜಾತಿಯ ನಂಟು ಪಡೆದು ಸಾರ್ವಜನಿಕರ ಸಂಪ್ರದಾಯಸ್ಥರ ಜ್ಯೋತಿಷಿಗಳ ಕಾಟವನ್ನು ಭರಿಸಿಕೊಂಡು ಕುಲಕಸುಬನ್ನು ಮುಂದುವರಿಸಿಕೊಂಡು ಬರುವುದರ ಮೂಲಕ ನಮ್ಮ ಕರ್ತವ್ಯವನ್ನು ನಿರಂತರವಾಗಿ ನಿರ್ವಹಿಸಿಕೊಂಡು ಬರುತ್ತಿದ್ದೇವೆ. ಇದರಿಂದ ನಾವು ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿಯುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮ ಕರ್ತವ್ಯವೆಂದು ಭಾವಿಸಿ ದುಡಿಯುತ್ತಿರುವ ಕ್ಷೌರಿಕನ ಬಗ್ಗೆ ತೀವ್ರ ಕಾಳಜಿ ವಹಿಸಬೇಕಾದ ಸರ್ಕಾರವೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ ಬಜೆಟ್ ಘೋಷಿಸುತ್ತಿದೆ. ಸರ್ಕಾರ ಘೋಷಿಸುವ ಬಜೆಟ್ ತಾಲೂಕು ಮಟ್ಟಕ್ಕೆ ಹಂಚಿಕೆಯಾದಾಗ 3ರಿಂದ 4ಜನಕ್ಕೆ ತಮ್ಮ ವೃತ್ತಿ ಅಭಿವೃದ್ಧಿಗೆ ಆರ್ಥಿಕ ನೆರವು ಸಿಗುತ್ತಿದೆ. ಹೀಗಾದಲ್ಲಿ ಕರ್ನಾಟಕದಲ್ಲಿ ಲಕ್ಷಾಂತರ ಕ್ಷೌರಿಕರು ಮತ್ತು ಇವರನ್ನು ಅವಲಂಬಿಸಿರುವವರ ಪಾಡೇನು, ಅದರಿಂದ ಮುಂದಿನ ಬಜೆಟ್ ನಲ್ಲಿ ಸವಿತಾ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವಂತೆ ಒತ್ತಾಯಿಸಿದರು.

ಧರಣಿಯಲ್ಲಿ ಎನ್. ಆರ್.ನಾಗೇಶ್, ವಿ.ರಾಜ್ ಕುಮಾರ್, ವಿ.ಮಂಜುನಾಥ್, ರಾಮ್ ಪ್ರಕಾಶ್, ಮುರಳೀಧರ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News