ಕ್ಷೌರಕ್ಕೆ ಅವಕಾಶ ನೀಡಲು ಒತ್ತಾಯಿಸಿ ದಲಿತರಿಂದ ಧರಣಿ

Update: 2017-10-17 17:48 GMT

ಮಂಡ್ಯ, ಅ.17: ಮೀಸೆ ಬೆಳೆಸಿಕೊಂಡ ಕಾರಣಕ್ಕೆ ದಲಿತ ಯುವಕನ ಮೇಲಿನ ಹಲ್ಲೆ ನಡೆಸಿದ ಸಂಬಂಧ ಗುಜರಾತ್‍ನಲ್ಲಿ ನಡೆಯುತ್ತಿರುವ ದಲಿತರ ಆಂದೋಲನ ಬೆಂಬಲಿಸಿ ಮತ್ತು ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದಲಿತ ಹಕ್ಕುಗಳ ಸಮಿತಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು   ಧರಣಿ ನಡೆಸಿತು.

ಧರಣಿ ನಡೆಸಿ ಮನವಿ ಸಲ್ಲಿಸಿದ ಧರಣಿನಿರತರರು ಮಾತನಾಡಿ,  ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ದಲಿತರ ಮೇಲಿನ ದೌರ್ಜನ್ಯ, ಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೀಸೆ ಬೆಳೆಸಿದ ಕಾರಣಕ್ಕೆ ಗುಜರಾತ್‍ನ ರಜಪೂತ್ ಸಮುದಾಯದ ಗುಂಪು ಪಿಯೂಷ್ ಪರ್ಮಾರ್ ಎಂಬ ದಲಿತ ಯುವಕ ಮತ್ತು ಕೈನಾಲ್ ಮಹೆರಿಯ ಕಾನೂನು ವಿದ್ಯಾರ್ಥಿ ಮೇಲೆ ಅಮಾನುಷ ಹಲ್ಲೆ ನಡೆಸಿದೆ. ಗರ್ಭಾ ನೃತ್ಯ ನೋಡಿದ ದಲಿತ ಯುವಕನ ಹತ್ಯೆಯಾಗಿದೆ. ಉತ್ತರಪ್ರದೇಶದಲ್ಲಿ ದಲಿತರು ದೂರು ನೀಡಲು ಹೋದರೆ ಪೊಲೀಸರು ಥಳಿಸಿದ್ದಾರೆ ಎಂದು ಕಿಡಿಕಾರಿದರು.

ಮಂಡ್ಯ ಜಿಲ್ಲೆಯಲ್ಲೂ ಅಸ್ಪೃಶ್ಯತೆ ಜೀವಂತವಿದ್ದು, ದಲಿತರಿಗೆ ಕ್ಷೌರ ನಿರಾಕರಣೆ ಮಾಡಲಾಗಿದೆ. ಹಲವು ಗ್ರಾಮಗಳ ದಲಿತರು ಕ್ಷೌರಕ್ಕೆ ನಗರಕ್ಕೆ ಹೋಗಬೇಕಾಗಿದೆ. ಮಳವಳ್ಳಿಯ ಕಿರುಗಾವಲಿನಲ್ಲಿ ಕ್ಷೌರಕ್ಕೆ ತೆರಳಿದ್ದ ದಲಿತ ಮೂಗು ಕೊಯ್ಯಲಾಗಿದೆ. ಮದ್ದೂರು ತಾಲೂಕು ವಳೆಗೆರೆಹಳ್ಳಿ ಕ್ಷೌರದ ವಿಚಾರವಾಗಿ ಶಾಂತಿಸಭೆ ನಡೆದಿದ್ದರೂ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ದಲಿತರಿಗೂ ಕ್ಷೌರ ಮಾಡಬೇಕು. ಕ್ಷೌರಕ್ಕೆ ಅಡ್ಡಿಪಡಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ವಳೆಗೆರೆಹಳ್ಳಿ ಭಾನುಪ್ರಕಾಶ್ ಮನೆ ತೆರವು ಕೈಬಿಟ್ಟು ರಕ್ಷಣೆ ಒದಗಿಸಬೇಕು. ಗಲಭೆ ಆಗಿರುವ ಗ್ರಾಮಗಳಿಗೆ ಪೊಲೀಸ್ ನಿಯೋಜಿಸಬೇಕು. ದೌರ್ಜನಕ್ಕೊಳಗಾದವರಿಗೆ ಪರಿಹಾರ ನೀಡಬೇಕು. ದಲಿತರ ಹಕ್ಕುಗಳನ್ನು ರಕ್ಷಿಸಬೇಕು ಎಂದು ಅವರು ಒತ್ತಾಯಿಸಿದರು.

ಧರಣಿಯಲ್ಲಿ ಸಮಿತಿ ಜಿಲ್ಲಾ ಸಂಚಾಲಕ ಆರ್.ಕೃಷ್ಣ, ಅಂಬೂಜಿ, ಬಿ.ಜೆ.ಕುಮಾರ್, ಶಂಕರ್, ಜೆ.ಸಿದ್ದರಾಜು, ಶಿವರಾಜು ಮರಳಿಗ, ಅಂಬರೀಶ್, ಭಾನುಪ್ರಕಾಶ್, ಶಂಕರ್, ಚಂದ್ರಶೇಖರ್, ಸ್ವಾಮಿ, ಚಂದ್ರಕುಮಾರ್, ಅಜಯ್, ಪ್ರಸನ್ನ, ರಂಗಸ್ವಾಮಿ ಇತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News