ಮುಂಡಗೋಡ: ಹೊಂಡಮಯ ರಸ್ತೆ; ದುರಸ್ತಿಗೆ ಗ್ರಾಮಸ್ಥರ ಒತ್ತಾಯ

Update: 2017-10-17 18:05 GMT

ಮುಂಡಗೋಡ, ಅ.17: ತಾಲೂಕಿನ ಚೌಡಳ್ಳಿ ಪಂಚಾಯತ್ ವ್ಯಾಪ್ತಿಯ ಕ್ಯಾಸನಕೇರಿ-ತ್ಯಾಮನಕೊಪ್ಪರಸ್ತೆಯಲ್ಲಿ ಹೊಂಡಗಳು ಬಿದ್ದು ರಸ್ತೆ ತೀರಾ ಹದಗೆಟ್ಟಿದ್ದು ಪರದಾಡುವಂತಾಗಿದೆ ಎಂದು ಮೂರ್ನಾಲ್ಕು ಗ್ರಾಮದ ಗ್ರಾಮಸ್ಥರು ಅವಲತ್ತುಕೊಂಡಿದ್ದಾರೆ.

ಈ ರಸ್ತೆಯು ಕ್ಯಾಸನಕೇರೆ ಹಾಗೂ ಮುಂಡಗೋಡ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ಕೊಂಡಿಯಾಗಿದೆ. ಈ ಡಾಂಬರ್ ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡಗಳು ಬಿದ್ದ ಪರಿಣಾಮ ಹೊಂಡಗಳು ಮಳೆಯ ನೀರಿನಿಂದ ತುಂಬಿಹೋಗಿವೆ. ರಸ್ತೆಯಲ್ಲಿ ವಾಹನ ಸಂಚಾರ ಮಾಡುವುದೇ ದುಸ್ತರವಾಗಿದೆ ರಾತ್ರಿಯಂತೂ ವಾಹನ ಸಂಚಾರ ಮಾಡುವುದು ಕಷ್ಟಸಾಧ್ಯ ಎಂದು ತಮ್ಮ ಅಳಲು ತೋಡಿಕೊಂಡರು.

ಗ್ರಾಮಸ್ಥರು 3 ಕಿ.ಮೀ. ದೂರದ ಮುಂಡಗೋಡ ಪಟ್ಟಣಕ್ಕೆ ಬರಲು ಈ ರಸ್ತೆಯ ಮೇಲೆಯೇ ಅವಲಂಬಿತ. ಈಗ ರಸ್ತೆ ಹದಗೆಟ್ಟಿರುವುದರಿಂದ ತ್ಯಾಮನಕೊಪ್ಪಗ್ರಾಮಸ್ಥರು ತಗ್ಗಿನಕೊಪ್ಪಮಾರ್ಗವಾಗಿ ಕರವಳ್ಳಿ ಬಂದು ಅಲ್ಲಿಂದ ಕುಸೂರ ಕತ್ತರಿಯ ಯಲ್ಲಾಪುರ-ಮುಂಡಗೋಡ ರಸ್ತೆಗೆ ಬಂದು 7-8 ಕಿ.ಮೀ ಪ್ರಯಾಣಿಸಿ ಮುಂಡಗೋಡ ಬರುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಇದರಿಂದ ವೇಳೆಯ ಜೊತೆಗೆ ಹಣವು ಖರ್ಚು. ಸಂಬಂಧಪಟ್ಟ ಇಲಾಖೆ ಈ ರಸ್ತೆಯನ್ನು ಕೂಡಲೇ ಡಾಂಬರೀಕರಣ ಮಾಡಿದರೆ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಸೇರಿದಂತೆ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಗ್ರಾಮಸ್ಥರ ಅಭಿಪ್ರಾಯ. ಈ ರಸ್ತೆಯ ಕುರಿತು ನಿಷ್ಕಾಳಜಿ ತೋರಿದರೆ ಮುಂದಿನ ದಿನಗಳಲ್ಲಿ ಹೊರಾಟದ ಹಾದಿ ಹಿಡಿಯುವುದಾಗಿ ಗ್ರಾಮಸ್ಥರಿಂದ ಮಾತು ಕೇಳಿಬಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News