ಜಾನಪದ ಶಿಕ್ಷಣದಿಂದ ನಾಡಿಗೆ ಭವಿಷ್ಯ: ಶಾಸಕ ಬಿ.ಬಿ. ನಿಂಗಯ್ಯ

Update: 2017-10-17 18:18 GMT

ಮೂಡಿಗೆರೆ, ಆ.17: ದೇಶದ ಮುಂದಿನ ಭವಿಷ್ಯ ಶಾಲಾ-ಕಾಲೇಜುಗಳಲ್ಲಿವೆ. ವಿದ್ಯಾರ್ಥಿಗಳಿಗೆ ಜಾನಪದ ಶೈಲಿಯ ಶಿಕ್ಷಣ ನೀಡುವ ಮೂಲಕ ಜಾನಪದ ರೀತಿಯಲ್ಲಿ ನಾಡಿನ ಭವಿಷ್ಯವನ್ನು ರೂಪಿಸಲು ಸರಕಾರ ಆಸಕ್ತಿ ತೋರಿಸಬೇಕೆಂದು ಶಾಸಕ ಬಿ.ಬಿ. ನಿಂಗಯ್ಯ ಹೇಳಿದ್ದಾರೆ.

ಪಟ್ಟಣದ ಹೊರವಲಯದ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ತಾಲೂಕು ಕನ್ನಡ ಜಾನಪದ ಪರಿಷತ್ ಹಾಗೂ ಹೊಂಗಿರಣ ಕನ್ನಡ ಬಳಗದಿಂದ ನಡೆದ ‘ಮರಳಿ ಬಾ ಜಾನಪದ ಲೋಕಕ್ಕೆ’ ಎಂಬ ಜಾನಪದ ಸಂಜೆ ಕಾರ್ಯಕ್ರಮವನ್ನು ಜೋಗಯ್ಯ ಹಾಗೂ ಜೋಗತ್ತಿಯ ಜೋಳಿಗೆ ತುಂಬಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಹಳ್ಳಿಯ ಹಿರಿಯರಿಂದ ಪ್ರಾರಂಭಗೊಂಡಿದ್ದ ಜಾನಪದ ಕಲಾ ಪ್ರಕಾರ ಪ್ರತಿಯೊಬ್ಬರ ಮಾತು, ಹಾಡುಗಾರಿಕೆ ಸಹಿತ ಇತರ ಎಲ್ಲ ಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳಲಾಗಿತ್ತು. ಕಾಲ ಬದಲಾದಂತೆ ಹಿರಿಯರ ತಲೆಮಾರು ಕೊನೆಗೊಂಡ ನಂತರ ಹೊಸ ತಲೆಮಾರು ಜಾನಪದ ಕಲಾ ಪ್ರಕಾರವನ್ನು ತಿಳಿದುಕೊಂಡಿಲ್ಲ. ಕಾಲ ಕಳೆದಂತೆ ಜಾನಪದ ಶೈಲಿ ಕಣ್ಮರೆಯಾಗುತ್ತಿದೆ. ಶಾಲಾ ಕಾಲೇಜು ಸಹಿತ ವಿಶ್ವವಿದ್ಯಾನಿಲಯಗಳಲ್ಲಿ ಜಾನಪದ ರೀತಿಯ ಶಿಕ್ಷಣವನ್ನು ನೀಡಿದಾಗ ಜಾನಪದ ಕಲಾಪ್ರಕಾರ ಪುನಃ ಶೂನ್ಯದಿಂದ ಚಿಗುರೊಡೆಯಲಿದೆ ಎಂದು ತಿಳಿಸಿದರು.

ಜಿಲ್ಲಾ ಕನ್ನಡ ಜಾನಪದ ಪರಿಷತ್‌ನ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ತಾಯಿಯ ಹೊಟ್ಟೆಯಿಂದ ಹುಟ್ಟಿದ ಮಗುವಿಗೆ ತೊಟ್ಟಿಲು ಹಾಕುವುದರೊಂದಿಗೆ ಜಾನಪದ ಶೈಲಿ ಪ್ರಾರಂಭಗೊಳ್ಳುತ್ತಿದೆ. ನಂತರ ಮಗು ದೊಡ್ಡದಾಗಿ ಮದುವೆಶಾಸ್ತ್ರ ಸಹಿತ ವಿವಿಧ ಶಾಸ್ತ್ರಗಳಲ್ಲಿ ಜಾನಪದ ಶೈಲಿಯನ್ನು ಕಾಣಬಹುದು. ಇಂತಹ ಮಹಾನ್ ಜಾನಪದ ಸಂಸ್ಕೃತಿ ಇಂದು ಕಣ್ಮರೆಯಾಗುತ್ತಿರುವುದು ದುರಂತ ಸಂಗತಿ. ಜಾನಪದ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತೆ ಯುವ ಜನಾಂಗಕ್ಕೆ ಕರೆ ನೀಡಿದರು.

ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಬಕ್ಕಿ ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಡಾ. ಎಂ.ಹನುಮಂತಪ್ಪ, ಸಿಬ್ಬಂದಿ ಸಲಹೆಗಾರ ಡಾ. ಬಿ.ಎಸ್.ಶಿವಕುಮಾರ್, ಡಾ.ಶಿವಪ್ರಸಾದ್, ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಸುಬ್ರಮಣ್ಯ, ಕಸಾಪ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್, ಮಣಿಕಂಠ, ಚಂದನ, ನಿದರ್ಶನ್ ಉಪಸ್ಥಿತರಿದ್ದರು. ಬಳಿಕ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News