ಕೇಂದ್ರ ಜಿಎಸ್‌ಟಿಯಿಂದ ಜನರ ಸುಲಿಗೆ: ವೇಣುಗೋಪಾಲ್

Update: 2017-10-17 18:26 GMT

ದಾವಣಗೆರೆ, ಅ.17: ನರೇಂದ್ರ ಮೋದಿ ಸರಕಾರ ಜಿಎಸ್‌ಟಿ ಮೂಲಕ ಜನರ ಸುಲಿಗೆ ಮಾಡುತ್ತಿದೆ ಎಂದು ರಾಜ್ಯ ಉಸ್ತುವಾರಿ ವೇಣುಗೋಪಾಲ್ ಕೇಂದ್ರ ಸರಕಾರದ ನಡೆಯನ್ನು ಟೀಕಿಸಿದ್ದಾರೆ.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್ ಮೂಲಕ 5 ರೂ.ಗೆ ತಿಂಡಿ, 10 ರೂ.ಗೆ ಊಟ ನೀಡುವ ಕೆಲಸ ಕಾಂಗ್ರೆಸ್ ಮಾಡುತ್ತಿದ್ದರೆ, ಮೋದಿ ಸರಕಾರ 28 ರೂ. ಜಿಎಸ್‌ಟಿ ತೆರಿಗೆ ವಿಧಿಸುತ್ತಿದೆ ಎಂದು ಅವರು ದೂರಿದರು.

ರಾಜ್ಯಾದ್ಯಂತ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದಡಿ ನಮ್ಮ ಸರಕಾರದ ಸಾಧನೆಯನ್ನು ಜನರಿಗೆ ತಿಳಿಸಲಾಗುತ್ತಿದೆ. ರಾಜ್ಯದಲ್ಲಿ 53 ಸಾವಿರ ಬೂತ್‌ಗಳಿದ್ದು, ಅವುಗಳಲ್ಲಿ ನಮ್ಮ ಪಕ್ಷವನ್ನು ಸಂಘಟಿಸಲು ಒತ್ತು ನೀಡಲಾಗಿದೆ. ಪಕ್ಷದ ಬಲವರ್ಧನೆಯ ಹಿನ್ನೆಲೆಯಲ್ಲಿ ಸ್ವತಃ ರಾಹುಲ್‌ಗಾಂಧಿ ಬೂತ್ ಮಟ್ಟದ ಅಧ್ಯಕ್ಷರಿಗೆ ಕರೆ ಮಾಡಿ, ಸಂಘಟನೆ ಬಗ್ಗೆ ಚರ್ಚಿಸುವರು ಎಂದು ಅವರು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಮಾತನಾಡಿ, ದಾವಣಗೆರೆಯ 8 ವಿಧಾನಸಭಾ ಕ್ಷೇತ್ರದಲ್ಲೂ ಈ ಬಾರಿ ನಮ್ಮ ಪಕ್ಷ ಗೆಲುವು ಸಾಧಿಸಲಿದೆ. ನಮ್ಮ ಭಾಗ್ಯದ ಯೋಜನೆಗಳು ಜನರಿಗೆ ತಲುಪಿವೆಯಾ ಎಂಬುದನ್ನು ಕಾರ್ಯಕರ್ತರು ಗಮನಿಸಿ, ಜನರಿಗೆ ಅವುಗಳನ್ನು ತಲುಪಿಸಬೇಕು. ಪಕ್ಷದಲ್ಲಿ ಸಣ್ಣಪುಟ್ಟ ಗೊಂದಲ, ಭಿನ್ನಾಭಿಪ್ರಾಯಗಳು ಸಹಜ. ಆದರೆ, ಅವುಗಳನ್ನೇ ದೊಡ್ಡದು ಮಾಡಿಕೊಳ್ಳುವುದು ಬೇಡ. ಪ್ರತೀ ಕ್ಷೇತ್ರದಲ್ಲೂ ಐದಾರು ಆಕಾಂಕ್ಷಿಗಳು ಇರುತ್ತಾರೆ. ಅಂತಹ ಕಡೆ ಅಸಮಾಧಾನ ಹೆಚ್ಚು. ಪಕ್ಷದ ವರಿಷ್ಠರು ಯಾರಿಗೆ ಟಿಕೆಟ್ ನೀಡುತ್ತಾರೋ ಅಂತಹವರ ಗೆಲುವಿಗೆ ಶ್ರಮಿಸೋಣ ಎಂದರು.

ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಶಾಸಕರಾದ ಕೆ. ಶಿವಮೂರ್ತಿನಾಯ್ಕ, ಡಿ.ಜಿ. ಶಾಂತನಗೌಡ, ಎಂ.ಪಿ. ರವೀಂದ್ರ, ಡಿ.ಜಿ.ಶಾಂತನಗೌಡ, ವಿಪ ಸದಸ್ಯ ಕೆ.ಅಬ್ದುಲ್ ಜಬ್ಬಾರ್, ಮೋಹನ ಕೊಂಡಜ್ಜಿ, ಮೇಯರ್ ಅನಿತಾಬಾಯಿ, ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ಡಾ.ವೈ. ರಾಮಪ್ಪ, ಡಿ. ಬಸವರಾಜ, ಬಿ.ಎಚ್.ವೀರಭದ್ರಪ್ಪ, ಅಸಗೋಡು ಜಯಸಿಂಹ, ಮಂಜುಳಾ ರಾಜು, ಸತೀಶ್ ಮಿಗಾ, ಜಿ.ಸಿ. ಚಂದ್ರಶೇಖರ, ಕೆ.ಪಿ.ಪಾಲಯ್ಯ, ದೂಡಾ ಅಧ್ಯಕ್ಷ ಎಚ್.ಜಿ.ರಾಮಚಂದ್ರಪ್ಪ, ಎಪಿಎಂಸಿ ಅಧ್ಯಕ್ಷ ಮುದೇಗೌಡ್ರ ಗಿರೀಶ, ಉಪ ಮೇಯರ್ ಮಂಜಮ್ಮ, ದಿನೇಶ ಕೆ.ಶೆಟ್ಟಿ, ಜಲಜಾ ನಾಯ್ಕ, ಗುಲ್ಷಾದ್ ಅಹಮ್ಮದ್, ಎಚ್.ಬಿ.ರಾಜು, ಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News