ಚಿಕ್ಕಮಗಳೂರು: ಕನ್ನಡ ರಾಜ್ಯೋತ್ಸವ ಸಿದ್ಧತೆಗೆ ಡಿಸಿ ಸೂಚನೆ

Update: 2017-10-17 18:29 GMT

ಚಿಕ್ಕಮಗಳೂರು, ಅ.17: ನಗರದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನ.1ರಂದು ಅದ್ದೂರಿಯಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಅಧಿಕಾರಿಗಳಿಗೆ ತಿಳಿಸಿದರು.

ಅವರು ಮಂಗಳವಾರ ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಕುರಿತು ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂದು ಬೆಳಗ್ಗೆ 9 ಗಂಟೆಗೆ ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ರಾಷ್ಟ್ರ ಧ್ವಜಾರೋಹಣವನ್ನು ನೆರವೇರಿಸಲಿದ್ದಾರೆ ಎಂದು ಹೇಳಿದರು.

ಅಂದು ಸಂಜೆ 6ಕ್ಕೆ ನಗರದ ಕುವೆಂಪು ಕಲಾಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದ್ದು, ಶಾಲಾ ಮಕ್ಕಳು ಹಾಗೂ ವಿವಿಧ ಕಲಾತಂಡಗಳಿಂದ ಕಾರ್ಯಕ್ರಮಗಳನ್ನು ರೂಪಿಸಲು ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ ಅವರು, ರಾಜ್ಯೋತ್ಸವ ದಿನದಂದು ಎಲ್ಲ್ಲ ಅಂಗಡಿ ಮುಂಗಟ್ಟು ಸೇರಿದಂತೆ ಸರಕಾರಿ ಇಲಾಖೆ ಕಚೇರಿಗಳನ್ನು ವಿದ್ಯುತ್‌ದೀಪಗಳಿಂದ ಅಲಂಕರಿಸಬೇಕು. ಎಲ್ಲ ಇಲಾಖೆ ಮುಖ್ಯಸ್ಥರು, ಸಿಬ್ಬಂದಿ ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ, ಉಪವಿಭಾಗಾಧಿಕಾರಿ ಸಂಗಪ್ಪ, ತಹಶೀಲ್ದಾರ್ ಪಿ.ಶಿವಣ್ಣ, ಸಾಹಿತ್ಯ ಪರಿಷತ್ ಹಾಗೂ ವಿವಿಧ ಕನ್ನಡಪರ ಸಂಘಟನೆಗಳು, ರಾಜಕೀಯ ಮುಖಂಡರು ಪದಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News