ಕ್ರೀಡೆಯಲ್ಲಿ ಸೋಲು, ಗೆಲುವುವನ್ನು ಸಮಾನವಾಗಿ ಸ್ವೀಕರಿದ್ದಲ್ಲಿ ಯಶಸ್ಸು ಸಾಧ್ಯ: ಕೋದಂಡರಾಮ್

Update: 2017-10-17 18:37 GMT

ದಾವಣಗೆರೆ, ಅ.17: ವಿದ್ಯಾರ್ಥಿಗಳು ವಿದ್ಯಾಭ್ಯಾಸ ಹಾಗೂ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದರ ಜೊತೆಗೆ ಜ್ಞಾನ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ. ಕೋದಂಡರಾಮ್ ತಿಳಿಸಿದರು.

ನಗರದ ಆಂಜನೇಯ ಬಡಾವಣೆಯ ಕುಸ್ತಿ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ರಾಜ್ಯ ಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಜೂಡೋ ಪಂದ್ಯಾವಳಿ 2017-18 ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡೆಯಿಂದ ವಿದ್ಯಾರ್ಥಿಗಳಿಗೆ ಸ್ಪರ್ಧೆ ಮನೋಭಾವ ಬೆಳೆಸುವ ಮೂಲಕ ಹೋರಾಟ ಕಲಿಸುತ್ತದೆ. ಕ್ರೀಡೆಗೆ ಯಾವುದೇ ರೀತಿಯ ಜಾತಿ ಭೇದ ಭಾವ ವಿಲ್ಲದೆ ಎಲ್ಲರನ್ನು ಸಮಾನ ದೃಷ್ಟಿಯಿಂದ ಕಾಣಲಾಗುತ್ತದೆ ಎಂದ ಅವರು, ಕ್ರೀಡೆಯಲ್ಲಿ ಸೋಲು ಗೆಲುವು ಎರಡನ್ನು ಸರಿಸಮಾನವಾಗಿ ಸ್ವೀಕರಿದಲ್ಲಿ ಯಶಸ್ಸು ಸಾಧ್ಯ. ಕ್ರೀಡಾಪಟುಗಳು ಕ್ರೀಡೆಯಲ್ಲಿ ಸಾಧನೆ ಮಾಡಲು ಯಾವುದೇ ಅಡ್ಡ ಮಾರ್ಗಗಳು ಇಲ್ಲ. ಪ್ರತಿನಿತ್ಯವು ತಮ್ಮ ಪರಿಶ್ರಮದ ಮೂಲಕ ಸಾಧನೆ ಮಾಡಬೇಕಾಗುತ್ತದೆ ಎಂದರು. 

ಜೂಡೋ ಪಂದ್ಯಾವಳಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಕ್ರೀಡಾಪಟುಗಳು ಆಗಮಿಸಿದ್ದು, ತೀರ್ಪುಗಾರರು ಎಲ್ಲರನ್ನು ಒಂದು ಸಮಾನ ದೃಷ್ಟಿಯಿಂದ ನೋಡಬೇಕು. ಯಾವುದೇ ರೀತಿಯ ಭಿನ್ನತೆ ಮಾಡದೆ ನಿಜವಾದ ಪ್ರತಿಭಾವಂತ ಕ್ರೀಡಾಪಟು ಗುರುತಿಸಿ ಆಯ್ಕೆ ಮಾಡಿ ರಾಜ್ಯ, ರಾಷ್ಟ್ರ ಮಟ್ಟಕ್ಕೆ ತಲುಪಿಸುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.

ಕುಸ್ತಿ ತರಬೇತುದಾರರ ಶಿವಾನಂದ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜೂಡೋ ಪಂದ್ಯಾವಳಿ ಪ್ರಮುಖ್ಯತೆ ಪಡೆಯುತ್ತಿದೆ. ಸರ್ಕಾರದಿಂದ ಕ್ರೀಡೆಗಳಿಗೆ ಉತ್ತಮ ಸೌಲಭ್ಯಗಳು ದೊರೆಯುತ್ತಿದ್ದು, ಕ್ರೀಡಾಪುಟಗಳು ಸದ್ಬಳಕೆ ಮಾಡಿಕೊಳ್ಳಬೇಕು. ಕ್ರೀಡಾಪಟುಗಳಿಗೆ ಉದ್ಯೋಗದಲ್ಲಿ ಮೀಸಲಾತಿ ಇದ್ದು, ವಿದ್ಯಾಭ್ಯಾಸ ವೇಳೆ ಕಟ್ಟಿದ ಶುಲ್ಕವನ್ನು ಮರು ಪಾವತಿ ಮಾಡಿಕೊಳ್ಳಬಹುದು ಎಂದರು.

ಜೂಡೋ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಗೆ ಸುಮಾರು 250ಕ್ಕೂ ಹೆಚ್ಚು ಕ್ರೀಡಾಪಟುಗಳು ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣಾಧಿಕಾರಿ ಪಿ. ಕೊಟ್ರೇಶ್, ಮಲ್ಲಿಕಾರ್ಜುನಪ್ಪ, ಪ್ರಕಾಶ್, ವೆಂಕಟೇಶ್, ಕೆ. ಭೈರಪ್ಪ, ತ್ರಿವೇಣಿ, ರಾಜೇಶ್, ಸಂಜುಪಾಟೀಲ್, ಸದಾಶಿವ, ವೀರಭದ್ರಯ್ಯ, ಅರ್ಜುನ್ ಮತ್ತಿತರರು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News