ಜಿಲ್ಲೆಯ ಅಭಿವೃದ್ಧಿಗೆ ನೀಲನಕ್ಷೆ ತಯಾರಿ: ಡಾ.ಗೀತಾ ಮಹದೇವಪ್ರಸಾದ್

Update: 2017-10-17 18:53 GMT

ಗುಂಡ್ಲುಪೇಟೆ, ಅ.17: ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಸಲಹೆಯ ಮೇರೆಗೆ ಜಿಲ್ಲೆಯ ಅಭಿವೃದ್ಧಿಗೆ ನೀಲನಕ್ಷೆ ತಯಾರಿಸಲಾಗುವುದು ಎಂದು ಸಕ್ಕರೆ ಹಾಗೂ ಸಣ್ಣಕೈಗಾರಿಕೆ ಖಾತೆಯ ಸಚಿವೆ ಡಾ.ಗೀತಾ ಮಹದೇವಪ್ರಸಾದ್ ಹೇಳಿದ್ದಾರೆ.

ಪಟ್ಟಣದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ನವಕರ್ನಾಟಕ 2025 ಸ್ವರೂಪದರ್ಶಿ ನೀಲನಕ್ಷೆ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆ ಹಾಗೂ ತಾಲೂಕಿನಲ್ಲಿ ಈ ಸಭೆಯನ್ನು ಪ್ರಥಮವಾಗಿ ಆಯೋಜಿಸಿದ್ದು, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ದೂರದೃಷ್ಟಿಯಿಂದ ಯೋಜನೆಗಳನ್ನು ಜಾರಿಗೊಳಿಸುವ ಸಲುವಾಗಿ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ಸಾರ್ವಜನಿಕರು ಹಾಗೂ ಮಾಧ್ಯಮದವರ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಅಭಿಪ್ರಾಯ ಸಂಗ್ರಹಿಸಿ ನೀಲನಕ್ಷೆ ತಯಾರಿಸಬೇಕಾಗಿದೆ. ಇದಕ್ಕೆ ಎಲ್ಲರ ಸಹಕಾರ ಮುಖ್ಯ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಅಚ್ಯುತರಾವ್ ಮಾತನಾಡಿ, ಮಾನವ ಹಾಗೂ ಪ್ರಾಕೃತಿಕ ಸಂಪನ್ಮೂಲಗಳು ಹೇರಳವಾಗಿದ್ದರೂ ಮಾನವ ಸಂಪನ್ಮೂಲಗಳ ಸೂಚ್ಯಂಕದಲ್ಲಿ ಜಿಲ್ಲೆಯು 23ನೆ ಸ್ಥಾನದಲ್ಲಿದ್ದರೂ ಗುಂಡ್ಲುಪೇಟೆಯು ಜಿಲ್ಲೆಯಲ್ಲಿಯೇ ಮೊದಲನೇ ಸ್ಥಾನದಲ್ಲಿದೆ. ನಬಾರ್ಡ್ ವರದಿಯನ್ವಯ ಕೃಷಿಯಲ್ಲಿ ವಾರ್ಷಿಕ 100 ರಿಂದ 120 ದಿನಗಳು ಮಾತ್ರ ಕೆಲಸದೊರಕಲಿದೆ. ಉಳಿದ ದಿನಗಳಲ್ಲಿ ಕಾರ್ಮಿಕರಿಗೆ ಕೂಲಿ ದೊರಕುವಂತಾಗಲು ಬೇರೆಬೇರೆ ಯೋಜನೆಗಳನ್ನು ರೂಪಿಸಬೇಕಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಎಚ್.ಎನ್.ನಟೇಶ್, ಸದಸ್ಯರಾದ ಎಸ್.ಎಸ್.ಮಧುಶಂಕರ್,ಶಿವಣ್ಣ, ಜಿಪಂ ಸದಸ್ಯರಾದ ಪಿ.ಚನ್ನಪ್ಪ, ಬಿ.ಕೆ.ಬೊಮ್ಮಯ್ಯ, ಕೆ.ಎಸ್.ಮಹೇಶ್, ತಾಪಂ ಇಒ ಎಚ್.ಎಸ್.ಬಿಂದ್ಯಾ, ಗ್ರಾಪಂ ಪಿಡಿಒ, ಅಧ್ಯಕ್ಷರು ಹಾಗೂ ಸದಸ್ಯರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News