ದಾವೂದ್ ಇಬ್ರಾಹಿಂಗೆ ಸೇರಿದ 6 ಆಸ್ತಿಗಳನ್ನು ಹರಾಜು ಹಾಕಲು ಮುಂದಾದ ಕೇಂದ್ರ

Update: 2017-10-19 09:23 GMT

ಮುಂಬೈ,ಅ.19 : ಭೂಗತ ಪಾತಕಿ ದಾವೂದ್ ಇಬ್ರಾಹಿಂ ಒಡೆತನದ ದಿಲ್ಲಿ ಝೈಕಾ ಎಂದೂ ಕರೆಯಲ್ಪಡುವ ಹೋಟೆಲ್ ರೌನಖ್ ಆಫ್ರೋಝ್  ಅನ್ನು ಎರಡು ವರ್ಷಗಳ ಹಿಂದೆ ಹರಾಜು ಹಾಕಿ ಮಾರಾಟ ಮಾಡುವ ವಿಫಲ ಯತ್ನದ ಬಳಿಕ ಇದೀಗ ಕೇಂದ್ರ ವಿತ್ತ ಸಚಿವಾಲಯವು ಈ  ಹೋಟೆಲ್ ಸೇರಿದಂತೆ ದಾವೂದ್ ಇಬ್ರಾಹಿಂಗೆ ಸೇರಿದ ಐದು ಇತರ ಆಸ್ತಿಗಳನ್ನೂ ಹರಾಜು ಹಾಕಲು ಮುಂದಾಗಿದೆ.

ಒಟ್ಟು ಮೀಸಲು ಬೆಲೆಯನ್ನು ರೂ. 5.54 ಕೋಟಿಗೆ ನಿಗದಿ ಪಡಿಸಿ ಸ್ಮಗ್ಲರ್ಸ್ ಆ್ಯಕ್ಟ್ ಫಾರೆನ್ ಎಕ್ಸ್ ಚೇಂಜ್ ಮ್ಯಾನಿಪ್ಯುಲೇಟರ್ಸ್ ಆಕ್ಟ್  ಅನ್ವಯ  ದಾವೂದ್ ಗೆ ಸೇರಿದ ಆರು ಆಸ್ತಿಗಳನ್ನು ಮಾರಾಟ ಮಾಡುವ ಬಗ್ಗೆ ಇತ್ತೀಚೆಗೆ ಪತ್ರಿಕೆಯಲ್ಲಿ ಜಾಹೀರಾತು ನೀಡಲಾಗಿತ್ತು.

ಹರಾಜು ಹಾಕಲ್ಪಡುವ ಆಸ್ತಿಗಳೆಂದರೆ ಮುಹಮ್ಮದ್ ಅಲಿ ರಸ್ತೆಯಲ್ಲಿರುವ ಶಬ್ನಂ ಗೆಸ್ಟ್ ಹೌಸ್,  ಪರ್ಲ್ ಹಾರ್ಬರ್ ಬಿಲ್ಡಿಂಗ್, ಮಝಗಾಂವ್ ಇಲ್ಲಿರುವ ಫ್ಲ್ಯಾಟ್,  ಸೈಫೀ ಜುಬಿಲೀ ಸ್ಟ್ರೀಟ್‍ನಲ್ಲಿರುವ ದಾದ್ರಿವಾಲ ಚೌಲ್ ನ ಬಾಡಿಗೆ ಹಕ್ಕು ಹಾಗೂ ಔರಂಗಾಬಾದ್ ನಲ್ಲಿರುವ 600 ಚದರ ಮೀಟರ್ ಫ್ಯಾಕ್ಟರಿ  ಸೈಟ್.

ಈ ಹಿಂದೊಮ್ಮೆ 2015ರಲ್ಲಿ  ಹರಾಜು ನಡೆದಿದ್ದಾಗ,  ಮಾಜಿ ಪತ್ರಕರ್ತ ಎಸ್ ಬಾಲಕೃಷ್ಣನ್ ಅವರ ಎನ್‍ಜಿಒ ದೇಶ್ ಸೇವಾ ಸಮಿತಿ  ಹೋಟೆಲ್ ರೌನಖ್ ಅಫ್ರೋಝ್ ಗೆ ರೂ. 4.28 ಕೋಟಿ ಬಿಡ್ ಸಲ್ಲಿಸಿ ರೂ. 30 ಲಕ್ಷ ಠೇವಣಿ ಪಾವತಿಸಿದ್ದರೂ ನಿಗದಿತ 30 ದಿನಗಳೊಳಗಾಗಿ ಉಳಿದ ಹಣವನ್ನು ಏರ್ಪಾಟು ಮಾಡಲು ಅದು ವಿಫಲವಾಗಿತ್ತು. ಈ ಬಾರಿ ಈ ನಿರ್ದಿಷ್ಟ ಆಸ್ತಿಯ ಹರಾಜಿಗೆ ಠೇವಣಿ ಮೊತ್ತವನ್ನು ರೂ. 23.72 ಲಕ್ಷಕ್ಕೆ ನಿಗದಿ ಪಡಿಸಲಾಗಿದೆ. ಮೀಸಲು ಬೆಲೆ ರೂ. 1.18 ಕೋಟಿಯಾಗಿದ್ದು ಈ  485 ಚದರ ಅಡಿ  ಆಸ್ತಿಯ ಮಾರುಕಟ್ಟೆ ಬೆಲೆ ರೂ. 6 ಕೋಟಿಯಿಂದ ರೂ. 8 ಕೋಟಿಯಷ್ಟಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News