ಸಾಲ ಬಾಧೆ: ರೈತ ಆತ್ಮಹತ್ಯೆ

Update: 2017-10-19 15:11 GMT

ಮಂಡ್ಯ, ಅ.19: ಸಾಲ ಬಾಧೆ ತಾಳಲಾರದೇ ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಾಂಡವಪುರ ತಾಲೂಕಿನ ಕಾಳೇಗೌಡನಕೊಪ್ಪಲು ಗ್ರಾಮದಲ್ಲಿ ಬುಧವಾರ ನಡೆದಿದೆ. 

ಮರಿಗೌಡ ಎಂಬವರ ಪುತ್ರ ಗಿರಿಗೌಡ(39) ಆತ್ಮಹತ್ಯೆ ಮಾಡಿಕೊಂಡ ರೈತನೆಮದುಗುರುತಿಸಲಾಗಿದೆ.

ಗಿರಿಗೌಡ ಅವರು ತನ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಗಿರಿಗೌಡ ತನ್ನ ತಂದೆ ಹೆಸರಿನಲ್ಲಿ ಮೊರಸನಹಳ್ಳಿ ಗ್ರಾಮದ ಎಲ್ಲೆಯಲ್ಲಿರುವ 2 ಎಕರೆ ಜಮೀನಿನಲ್ಲಿ ಬೋರ್‍ವೆಲ್ (ಕೊಳವೆಬಾವಿ) ಕೊರೆಸಲು 9 ವರ್ಷಗಳ ಹಿಂದೆ ಎಸ್‍ಬಿಐನಲ್ಲಿ ತೆಗೆದ 1.80 ಲಕ್ಷ ರೂ. ಸಾಲ ಕಟ್ಟಲಾಗದೆ ಬಡ್ಡಿ ಹೆಚ್ಚಾಗಿ 6 ಲಕ್ಷ ರೂ.ಗೇರಿತ್ತು. ಕೊಳವೆಬಾವಿಯಲ್ಲಿ ನೀರು ಬಂದಿರಲಿಲ್ಲ. ಇದಲ್ಲದೆ, ಅಕ್ಕ, ತಂಗಿ ಮದುವೆಗೆ ಸುಮಾರು 5 ಲಕ್ಷ ರೂ. ಕೈಸಾಲ ಮಾಡಿಕೊಂಡಿದ್ದು, ಈಚೆಗೆ ಸುರಿದ ಮಳೆಯಿಂದ ರಾಗಿ, ತರಕಾರಿ ಬೆಳೆ ಹಾಳಾಗಿತ್ತು. ಹಾಗಾಗಿ ತನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತ್ನಿ ಸುವರ್ಣ ಪೊಲೀಸರಿಗೆ ದೂರು ನೀಡಿದ್ದಾರೆ.

ಪುಟ್ಟಣ್ಣಯ್ಯ ಸಾಂತ್ವನ: ಸ್ಥಳಕ್ಕೆ ಭೇಟಿ ನೀಡಿ ಮೃತ ರೈತನ ಕುಟುಂಬದವರಿಗೆ ಸಾಂತ್ವನ ಹೇಳಿದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ, ರೈತರ ಆತ್ಮಹತ್ಯೆಯನ್ನು ಸರಕಾರಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಸಾಲಕ್ಕೆ ಹೆದರಿ ಆತ್ಮಹತ್ಯೆ ಹಾದಿ ಹಿಡಿಯಬಾರದು ಎಂದು ಸಲಹೆ ಮಾಡಿದ ಅವರು, ಸದ್ಯದಲ್ಲೇ ಪ್ರಧಾನಿ ಮೋದಿ ಭೇಟಿಯಾಗಿ ರೈತರ ಸಾಲಮನ್ನಾ, ಬೆಳೆಗಳಿಗೆ ವೈಜ್ಞಾನಿಕ ದರ ನಿಗದಿ, ಇತರೆ ವಿಷಯಗಳ ಬಗ್ಗೆ ಒತ್ತಾಯಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News