ಗಾಂಜಾ ಬೆಳೆ: ಓರ್ವ ಬಂಧನ

Update: 2017-10-19 16:13 GMT

ಮಡಿಕೇರಿ, ಅ.19 : ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕೂತಿ ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿರುವುದನ್ನು ಸೋಮವಾರಪೇಟೆ ಪೊಲೀಸರು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ದಾಳಿಯ ವೇಳೆ ಸುಮಾರು 12 ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದು, ಅವುಗಳ ಅಂದಾಜು ತೂಕ 7 ಕೆ.ಜಿ. 700 ಗ್ರಾಂ ಆಗಿದ್ದು, ಈ ಸಂಬಂಧ ಆರೋಪಿ ಜಿತೇಂದ್ರ ಎಚ್.ಆರ್. ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಮನೆಯ ಹಿಂದಿನ ಕಾಫಿ ತೋಟದಲ್ಲಿ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಕಾಫಿ ಗಿಡಗಳ ಮಧ್ಯೆ ಗಾಂಜಾ ಗಿಡ ಬೆಳೆದಿರುವ ಬಗ್ಗೆ ಖಚಿತ ಮಾಹಿತಿಯನ್ನು ಕಲೆ ಹಾಕಿದ ಪೊಲೀಸರು ಜಿತೇಂದ್ರನನ್ನು ಬಂಧಿಸಿ ಗಾಂಜಾವನ್ನು ವಶ ಪಡಿಸಿಕೊಂಡಿದ್ದಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ.ರಾಜೇಂದ್ರ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ಉಪ ವಿಭಾಗದ ಡಿವೈಸ್ಪಿ ಸಂಪತ್ ಕುಮಾರ್ ಅವರ ನೇತೃತ್ವದಲ್ಲಿ ಸೋಮವಾರಪೇಟೆ ಪಿಸ್ಸೈ ಶಿವಣ್ಣ, ಸಿಬ್ಬಂದಿಗಳಾದ ಶಿವಕುಮಾರ್, ಕುಮಾರ, ರಮೇಶ, ಜಗದೀಶ, ಮಹೇಂದ್ರ, ಸಂದೇಶ ಮತ್ತು ಮಧು ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರಕರಣವನ್ನು ಪತ್ತೆ ಹಚ್ಚಿದ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಿ ಪೆÇಲೀಸ್ ಅಧೀಕ್ಷಕರು ನಗದು ಬಹುಮಾನವನ್ನು ಘೋಷಿಸಿದ್ದಾರೆ.

ಮಾಹಿತಿ ನೀಡಲು ಮನವಿ: ಕೊಡಗು ಜಿಲ್ಲೆಯಾದ್ಯಂತ ಗಾಂಜಾ ಮಾರಾಟ ಜಾಲ ಹಬ್ಬಿಕೊಂಡಿದ್ದು, ಯುವಕರು ಮಾದಕ ವಸ್ತುಗಳ ವ್ಯಸನಿಗಳಾಗುತ್ತಿದ್ದು, ಇದನ್ನು ತಡೆಯುವಲ್ಲಿ ಪೊಲೀಸರೊಂದಿಗೆ ಸಾರ್ವಜನಿಕರು ಸಹಕರಿಸಿ ಯಾವುದೇ ಮಾದಕ ವಸ್ತುಗಳ ಬಗ್ಗೆ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ತಮ್ಮ ಗ್ರಾಮದ ಬೀಟ್ ಅಧಿಕಾರಿಗಳಿಗಾಗಲೀ ಅಥವಾ ಸಂಬಂಧಪಟ್ಟ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಿಗಾಗಲೀ ನೀಡುವಂತೆ ಎಸ್ಪಿ ಪಿ.ರಾಜೇಂದ್ರ ಪ್ರಸಾದ್ ಮನವಿ ಮಾಡಿದ್ದಾರೆ.

ಕೊಡಗು ಜಿಲ್ಲೆಯಾದ್ಯಂತ ಸುಮಾರು 30 ಕಡೆಗಳಲ್ಲಿ ಸಲಹಾ ಪೆಟ್ಟಿಗಳನ್ನು ಇರಿಸಲಾಗಿದ್ದು ಯಾವುದೇ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಸಾರ್ವಜನಿಕರು ನೀಡಬಹುದಾಗಿದೆ. ಮಾಹಿತಿ ನೀಡಿದ ಸಾರ್ವಜನಿಕರು ತಮ್ಮ ಹೆಸರು ನಮೂದಿಸುವ ಅಗತ್ಯವಿರುವುದಿಲ್ಲ. ಹೆಸರು ನಮೂದಿಸಿ ಮಾಹಿತಿ ನೀಡಿದ ಸಾರ್ವಜನಿಕರ ವಿವರವನ್ನು ಗೌಪ್ಯವಾಗಿಡಲಾಗುವುದು ಹಾಗೂ ಸೂಕ್ತ ಬಹುಮಾನವನ್ನು ನೀಡಲಾಗುವುದೆಂದು ಎಸ್ಪಿ ತಿಳಿಸಿದ್ದಾರೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News