ಪ್ರಹ್ಲಾದ್ ಜೋಶಿ ವಿರುದ್ಧ ಎಸ್.ಆರ್.ಹಿರೇಮಠ್ ವಾಗ್ದಾಳಿ

Update: 2017-10-19 16:48 GMT

ಹುಬ್ಬಳ್ಳಿ, ಅ.19: ಸಂಸದ ಪ್ರಹ್ಲಾದ್ ಜೋಶಿ ತಮ್ಮ ವಿರುದ್ಧ ಮಾಡುತ್ತಿರುವ ಅಪಪ್ರಚಾರವನ್ನು ತಕ್ಷಣ ನಿಲ್ಲಿಸಬೇಕು. ಇಲ್ಲದಿದ್ದರೆ, ಅವರಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ್ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನ್ಯಾಯಾಲಯವು ನನಗೆ ದಂಡ ವಿಧಿಸಿದೆ ಎಂದು ವಕೀಲರ ಮೂಲಕ ಪ್ರಹ್ಲಾದ್ ಜೋಶಿ ಅಪಪ್ರಚಾರ ಮಾಡುತ್ತಿದ್ದಾರೆ. ಸತ್ಯಾಂಶವನ್ನು ಮಾರೆಮಾಚಿ ಸುಳ್ಳು ವಿಷಯಗಳನ್ನು ಹರಡಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಪ್ರಹ್ಲಾದ್‌ ಜೋಶಿ ಕೀಳುಮಟ್ಟದ ರಾಜಕೀಯ ಮಾಡುವುದನ್ನು ನಿಲ್ಲಿಸಲಿ, ಅಗ್ಗದ ಪ್ರಚಾರಕ್ಕಾಗಿ ಗಿಮಿಕ್ ಮಾಡವುದು ಬೇಡ. ನಾನು ಹಿಂಡ್ ಅಂಡ್ ರನ್ (ಗುದ್ದೋಡು) ಮಾಡುತ್ತೇನೆ ಎಂದು ಟೀಕಿಸಿರುವುದು ಖಂಡನೀಯ. ಕಳೆದ 35 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದೇನೆ. ಕಾನೂನು ಬಾಹಿರವಾಗಿ ಎಂದಿಗೂ ನಡೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ, ಉದ್ಯಮಿ ವಿ.ಜಿ.ಸಿದ್ಧಾರ್ಥ ಅಕ್ರಮ ಅವ್ಯವಹಾರಗಳಲ್ಲಿ ತೊಡಗಿದ್ದಾರೆ. ಕಾನೂನು ಉಲ್ಲಂಘಿಸಿ ಅಕ್ರಮ ಸಂಪಾದನೆ ಮಾಡಿದ್ದಾರೆ. ಅವರ ಒಡೆತನದ ಕೆಫೆ ಕಾಫಿಡೇ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಸುಮಾರು 650 ಕೋಟಿ ರೂ. ಮೌಲ್ಯದ ಅಘೋಷಿತ ಆದಾಯ ಪತ್ತೆ ಹಚ್ಚಿದ್ದಾರೆ ಎಂದು ತಿಳಿಸಿದರು.

ಸಿದ್ಧಾರ್ಥ ಹಾಗೂ ಎಸ್.ಎಂ.ಕೃಷ್ಣ ಮಾಡಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿ ಎಸ್‌ಐಟಿಗೆ ದಾಖಲೆ ಸಹಿತ ಶೀಘ್ರವೇ ದೂರು ಸಲ್ಲಿಸುತ್ತೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News