ಚಿಕಿತ್ಸೆ ಇಲ್ಲದೆ ಗಂಟೆಗಟ್ಟಲೇ ನರಳಿದ ಗರ್ಭಿಣಿಯರು

Update: 2017-10-19 17:08 GMT

ಮಂಡ್ಯ, ಅ.19: ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಇಲ್ಲದೆ ಇಬ್ಬರು ಗರ್ಭಿಣಿ ಮಹಿಳೆ ಸುಮಾರು ಮುಕ್ಕಾಲು ಗಂಟೆ ನರಳಿದ ಘಟನೆ ಜಿಲ್ಲೆಯಲ್ಲಿ ಬುಧವಾರ ನಡೆದಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಡ್ಯ ತಾಲೂಕಿನ ನಲ್ಲಹಳ್ಳಿ ಗ್ರಾಮದ ಶೋಭ ಮತ್ತು ಮಳವಳ್ಳಿ ತಾಲೂಕಿನ ಬೆಳಕವಾಡಿ ಗ್ರಾಮದ ದಿವ್ಯ ಎಂಬ ಮಹಿಳೆಯರು ವೈದ್ಯರು ಮತ್ತು ದಾದಿಯರ ಲಭ್ಯವಿಲ್ಲದೆ ಹಲವು ಗಂಟೆ ನರಳಬೇಕಾಯಿತು.

ದಿನವಿಡೀ ಸಾರ್ವಜನಿಕರ ಸೇವೆಗೆ ಲಭ್ಯವಿರಬೇಕಾಗಿದ್ದ ಬೆಳಕವಾಡಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು, ದಾದಿಯರು ಇರಲಿಲ್ಲ. ಈ ಹಿನ್ನೆಲೆಯಲ್ಲಿ ಹೆರಿಗೆಗೆ ಕರೆತಂದಿದ್ದ ದಿವ್ಯ ಎಂಬ ಮಹಿಳೆ ಆಸ್ಪತ್ರೆಯ ಮುಂದೆಯೇ ಗಂಟೆಗಟ್ಟಲೆ ನರಳಬೇಕಾಗಿ ಬಂತು.

ಹೆರಿಗೆ ನೋವು ಕಾಣಿಸಿಕೊಂಡ ಸ್ಥಳೀಯ ಚಿಕ್ಕಗಾಣಿಗರ ಬೀದಿಯ ನಿವಾಸಿ ಮಂಜು ಪತ್ನಿ ದಿವ್ಯ ಅವರನ್ನು ಗ್ರಾಮದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಾಯಿ ಮತ್ತು ಅತ್ತೆ ಕರೆತಂದಾಗ, ಆಸ್ಪತ್ರೆಯಲ್ಲಿ ವೈದ್ಯರಲ್ಲದೆ, ದಾದಿಯರೂ ಇರಲಿಲ್ಲ. ಆಸ್ಪತ್ರೆ ಆವರಣದಲ್ಲಿ ದಿವ್ಯ ನರಳಾಡುತ್ತಿದ್ದುದನ್ನು ಗಮನಿಸಿದ ಸಾರ್ವಜನಿಕರು ಮಳವಳ್ಳಿ ತಾಲೂಕು ಆಸ್ಪತ್ರೆಗೆ ಕರೆಮಾಡಿ ಆಂಬ್ಯುಲೆನ್ಸ್ ಕರೆಸಿಕೊಂಡು ಕಳುಹಿಸಿದರು. ಮಳವಳ್ಳಿ ಆಸ್ಪತ್ರೆಗೆ ದಾಖಲಾದ ತಕ್ಷಣ ದಿವ್ಯ ಗಂಡು ಮಗುವಿಗೆ ಜನ್ಮವಿತ್ತರು.

ಹೆರಿಗೆ ನೋವು ಕಾಣಿಸಿಕೊಂಡ ಮಂಡ್ಯ ತಾಲೂಕು ನಲ್ಲಹಳ್ಳಿಯ ಶೋಭ ಅವರನ್ನು ಹತ್ತಿರದ ಕೀಲಾರದ ಸಮುದಾಯ ಆಸ್ಪತ್ರೆಗೆ ಕರೆತರಲಾಯಿತು. ವೈದ್ಯರಿಲ್ಲದ ಕಾರಣ, ಮಂಡ್ಯ ಜಿಲ್ಲಾಸ್ಪತ್ರೆಗೆ ತಂದರೂ ವೈದ್ಯರಿಲ್ಲದ ಕಾರಣ ಸಿಬ್ಬಂದಿ ಚಿಕಿತ್ಸೆ ನಿರಾಕರಿಸಿದರು ಎನ್ನಲಾಗಿದೆ.

ಕೊನೆಗೆ ಶೋಭ ಪೋಷಕರು ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದರು. ವೈದ್ಯರು ಸಿಸರೇನಿಯನ್ ಶಸ್ತ್ರಚಿಕಿತ್ಸೆ ನಡೆಸಿ ತಾಯಿ ಮಗು ಜೀವ ಉಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News