ಮಂಡ್ಯ: ಪಶು ಆಸ್ಪತ್ರೆ ಸ್ಥಳಾಂತರ ಖಂಡಿಸಿ ಪ್ರತಿಭಟನೆ

Update: 2017-10-19 17:13 GMT

ಮಂಡ್ಯ, ಅ.19: ನಗರದ ಗುತ್ತಲು ಬಡಾವಣೆಯ ಪಶು ಚಿಕಿತ್ಸಾಲಯವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸ್ಥಳಾಂತರಿಸಿರುವ ಕ್ರಮ ಖಂಡಿಸಿ ನಿವಾಸಿಗಳು ಜಾನುವಾರುಗಳೊಂದಿಗೆ ಗುರುವಾರ ಪ್ರತಿಭಟನೆ ನಡೆಸಿದರು.

ಮಂಡ್ಯ-ಕೆ.ಎಂ.ದೊಡ್ಡಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ ಪ್ರತಿಭಟನಾಕಾರರು, ಬಳಿಕ ಆಸ್ಪತ್ರೆ ಆವರಣದಲ್ಲಿ ಧರಣಿ ನಡೆಸಿ  ಸರಕಾರ ಮತ್ತು ಸಂಬಂಧಿಸಿದ ಸಚಿವರು, ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸದರಿ ಆಸ್ಪತ್ರೆಯಿಂದ ಗುತ್ತಲು, ಸ್ವರ್ಣಸಂದ್ರ, ಚಿಕ್ಕೇಗೌಡನದೊಡ್ಡಿ, ತಾವರೆಗೆರೆ, ಯತ್ತಗದಹಳ್ಳಿ, ಚನ್ನಪ್ಪನದೊಡ್ಡಿ ಗ್ರಾಮಗಳ ರೈತರಿಗೆ ಅನುಕೂಲವಾಗುತ್ತಿದ್ದು, ಏಕಾಏಕಿ ಆಸ್ಪತ್ರೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕು ನೆಲವಾಗಿಲು ಗ್ರಾಮಕ್ಕೆ ವರ್ಗಾವಣೆ ಮಾಡಿದೆ ಎಂದು ಕಿಡಿಕಾರಿದರು.

ಸರಕಾರದ ಕ್ರಮದಿಂದಾಗಿ ಈ ಭಾಗದ ರೈತರು ತಮ್ಮ ಜಾನುವಾರಗಳ ಚಿಕಿತ್ಸೆಗಾಗಿ ಸುಮಾರು 6 ಕಿ.ಮೀ ದೂರದ ಬಿ.ಹೊಸೂರು ಗ್ರಾಮಕ್ಕೆ ಹೋಗಬೇಕಾಗುತ್ತದೆ. ವಾಹನಗಳಲ್ಲಿ ರೋಗಗ್ರಸ್ಥ ಜಾನುವಾರು ತೆಗೆದುಕೊಂಡು ಹೋಗುವುದು ಅನಿವಾರ್ಯವಾದ್ದರಿಂದ  ಆರ್ಥಿಕ ಹೊರೆಯಾಗಲಿದೆ ಎಂದು ಅಳಲು ತೋಡಿಕೊಂಡರು.

ಕೂಡಲೇ ಆಸ್ಪತ್ರೆ ಸ್ಥಳಾಂತರ ಆದೇಶವನ್ನು ಕೂಡಲೇ ರದ್ದುಗೊಳಿಸಬೇಕು ಎಂದು ತಾಕೀತು ಮಾಡಿದ ಅವರು, ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಮತ್ತು ನಿರಂತರ ಧರಣಿ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. 

ಪ್ರತಿಭಟನೆಯಲ್ಲಿ ನಗರಸಭಾ ಸದಸ್ಯ ಅನಿಲ್‍ ಕುಮಾರ್, ಚಿಕ್ಕಣ್ಣ, ಹೊನ್ನೇಶ್, ಶ್ರೀನಿವಾಸಮೂರ್ತಿ, ಸುಂದರೇಶ್, ಮುತ್ತುರಾಜು, ಕೃಷ್ಣ, ನಿಂಗಯ್ಯ, ಕಿರಣ್‍ಗೌಡ ಇತರರು  ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News