ಅತಿವೃಷ್ಟಿ ನಿಭಾಯಿಸುವಲ್ಲಿ ಜಿಲ್ಲಾಡಳಿತ ವಿಫಲ: ಪ್ರತಿಭಟನೆ

Update: 2017-10-19 17:21 GMT

ತುಮಕೂರು, ಅ.19: ಇತ್ತೀಚೆಗೆ ಬಿದ್ದ ಭಾರೀ ಮಳೆಯಿಂದಾಗಿ ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ ಅನೇಕ ರೈತರ ಬೆಳೆಗಳು ಹಾಳಾಗಿದ್ದು ಅತಿವೃಷ್ಟಿ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಆರೋಪಿಸಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್‍ಗೌಡ ನೇತೃತ್ವದಲ್ಲಿ ಗುರುವಾರ ನೂರಾರು ರೈತರು ಹಾಗೂ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಗ್ರಾಮಾಂತರ ಕ್ಷೇತ್ರದಿಂದ ನೂರಾರು ರೈತರೊಂದಿಗೆ ಆಗಮಿಸಿದ ಶಾಸಕ ಸುರೇಶ್‍ಗೌಡ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸಮಾವೇಶಗೊಂಡು ಧರಣಿ ನಡೆಸಿ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಶಾಸಕ ಬಿ.ಸುರೇಶ್‍ಗೌಡ, ಊರುಕೆರೆ ಗ್ರಾಮ ಪಂಚಾಯತ್ ಗೆ ಸೇರಿದ ನರಸಾಪುರ, ಹೆಬ್ಬಾಕ, ಕಳಸೇಗೌಡನ ಪಾಳ್ಯ ಗ್ರಾಮಗಳ ವ್ಯಾಪ್ತಿಯಲ್ಲಿ ಸುಮಾರು 100 ರಿಂದ 150 ಎಕರೆ ಬೆಳೆ ಅತಿವೃಷ್ಟಿಯಿಂದ ನಾಶವಾಗಿದ್ದು ಇವರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಬುಗುಡನಹಳ್ಳಿ ಕೆರೆಯಲ್ಲಿ ನೀರು ಸಂಗ್ರಹವಾಗಿರುವುದರಿಂದ ಈ ಏರಿಗೆ ಹೊಂದಿಕೊಂಡಂತೆ ಪಕ್ಕದ ರೈತರ ಜಮೀನುಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ತೆಂಗು ಹಾಗೂ ಭತ್ತ, ರಾಗಿ, ತೊಗರಿ ಮುಂತಾದ ಬೆಳೆಗಳು ನೀರಿನಿಂದ ಫಸಲು ಬರದಂತಾಗಿವೆ ಎಂದರು.

ರೈತರ ಹೊಲಗಳಲ್ಲಿ ನೀರು ನಿಂತು ಬೆಳೆ ನಷ್ಟವಾಗಿದ್ದು ಈ ನೀರನ್ನು ತೆರವು ಗೊಳಿಸಿ ಹೊಲ ತೋಟಗಳನ್ನು ಉಳಿಸಿಕೊಡಬೇಕಾಗಿದೆ ಎಂದರು.
ರೈತರ ಬೆಳೆ ನಷ್ಟ ಪರಿಹಾರಕ್ಕೆ ಸೂಕ್ತ ಪರಿಹಾರ ನೀಡಬೇಕು. ಬುಗಡನಹಳ್ಳಿ ಕೆರೆ ಭರ್ತಿಯಾಗಿರುವುದರಿಂದ ಕೋಡಿಯ ಗೇಟ್‍ನ್ನು ಎತ್ತಿ ನೀರನ್ನು ಹೊರಬಿಡಬೇಕು. ಕೆರೆಯ ಕೋಡಿಯ ಮಟ್ಟವನ್ನು 3 ಅಡಿ ಕಡಿಮೆ ಮಾಡಬೇಕು. ಜಿಲ್ಲಾಧಿಕಾರಿಗಳು ತತ್‍ಕ್ಷಣವೇ ಸ್ಥಳ ವೀಕ್ಷಣೆ ಮಾಡಿ ಬೆಳೆ ಪರಿಹಾರ ನೀಡಬೇಕು ಎಂಬ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಪ್ರಭಾರ ಜಿಲ್ಲಾಧಿಕಾರಿ ಕೆ.ಜಿ ಶಾಂತರಾಮ್ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಹೆಬ್ಬಾಕ ರವಿಶಂಕರ್, ಜಿ.ಪಂ. ಉಪಾಧ್ಯಕ್ಷೆ ಶಾರದಾನರಸಿಂಹಮೂರ್ತಿ, ಶಿವಕುಮಾರ್, ಜಗದೀಶ್, ಶ್ರೀನಿವಾಸ್, ರಾಜಕುಮಾರ್, ಸಿದ್ದಪ್ಪ, ಮಹಾಲಿಂಗಪ್ಪ, ನಾಗರಾಜು ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News