×
Ad

ಶಿವಮೊಗ್ಗ: ಐವರು ನೌಕರರ ವಿರುದ್ಧ ಪೌರಾಡಳಿತ ನಿರ್ದೇಶನಾಲಯದಿಂದ ಕ್ರಮ

Update: 2017-10-19 23:01 IST

ಶಿವಮೊಗ್ಗ, ಅ.19: ಮಹಾನಗರ ಪಾಲಿಕೆಗೆ ಸೇರಿದ ಸೊತ್ತನ್ನು ಖಾಸಗಿ ಸೇವಾ ಸಮಿತಿಗೆ ಕಾನೂನು ಬಾಹಿರವಾಗಿ ಖಾತೆ ಮಾಡಿಕೊಟ್ಟ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಪೌರಾಡಳಿತ ನಿರ್ದೇಶನಾಲಯವು ಪಾಲಿಕೆಯ ಇಬ್ಬರು ನಿವೃತ್ತ ನೌಕರರು ಸೇರಿದಂತೆ ಐವರ ವಿರುದ್ಧ ಕ್ರಮ ಜರಗಿಸಲು ಮುಂದಾಗಿದೆ.

ಪ್ರಕರಣ ಸಂಬಂಧ ಸಹಾಯಕ ಕಂದಾಯಾಧಿಕಾರಿ ಯಶವಂತ ಹಾಗೂ ಪ್ರಥಮ ದರ್ಜೆ ಕಂದಾಯ ನಿರ್ವಾಹಕ ಎಸ್. ರವಿಕುಮಾರ್ ಅವರನ್ನು ಅಮಾನತು ಗೊಳಿಸಲಾಗಿದೆ. ಕಂದಾಯ ವಿಭಾಗದ ಉಪ ಆಯುಕ್ತ ಎ.ಜೆ.ನಾಗರಾಜ್ ಅವರು ಮೂಲತಃ ಕರ್ನಾಟಕ ರಾಜ್ಯ ಹಣಕಾಸು ಇಲಾಖೆಗೆ ಸೇರಿದವರಾಗಿದ್ದು, ಇವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಕೋರಿ ಸರಕಾರಕ್ಕೆ ಪತ್ರ ಬರೆಯಲಾಗುತ್ತಿದೆ.

ಜೊತೆಗೆ ಈಗಾಗಲೇ ವಯೋ ನಿವೃತ್ತಿ ಹೊಂದಿರುವ ಕಂದಾಯಾಧಿಕಾರಿ ರುಕ್ಮಿಣಿ ಹಾಗೂ ಕರ ವಸೂಲಿಗಾರ ಗುರುರಾಜ್ ಅವರ ವಿರುದ್ಧ ಮುಂದಿನ ಕಾನೂನು ಕ್ರಮ ಜರಗಿಸಲು ಸರಕಾರದ ನಿರ್ದೇಶನ ಕೋರಿ ಪತ್ರ ಬರೆಯಲಾಗುತ್ತಿದೆ. ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಡಾ. ಆರ್. ವಿಶಾಲ್‌ ಅವರು ಈ ಕುರಿತಂತೆ ಆದೇಶ ಹೊರಡಿಸಿದ್ದಾರೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.

ಆರೋಪವೇನು?: ಶಿವಮೊಗ್ಗ ಮಹಾನಗರ ಪಾಲಿಕೆಯ ಕಂದಾಯ ಶಾಖೆಯಲ್ಲಿ ಅಕ್ರಮ - ಅವ್ಯವಹಾರಗಳು ನಡೆಯುತ್ತಿರುವ ಕುರಿತಂತೆ ಪಾಲಿಕೆ ಸದಸ್ಯರು ಆರೋಪಿಸಿದ್ದರು. ಈ ಕುರಿತಂತೆ ತನಿಖೆ ನಡೆಸುವಂತೆ ಕೋರಿ ಆಯುಕ್ತರಿಗೆ ದೂರು ಸಲ್ಲಿಸಿದ್ದರು. ಇದರ ಆಧಾರದ ಮೇಲೆ ಪೌರಾಡ ಳಿತ ನಿರ್ದೇಶನಾಲಯದ ತನಿಖಾ ತಂಡವು ಸೆಪ್ಟಂಬರ್ 7ರಿಂದ 9ರ ವರೆಗೆ ಪಾಲಿಕೆಗೆ ಆಗಮಿಸಿ ತನಿಖೆ ನಡೆಸಿತ್ತು. ಈ ನಡುವೆ ಪಾಲಿಕೆ ಆಯುಕ್ತ ಮುಲ್ಲೈ ಮುಹಿಲನ್‌ ಅವರು ಕಾನೂನು ಬಾಹಿರವಾಗಿ ಖಾತೆ ಮಾಡಿಕೊಟ್ಟ ಪಾಲಿಕೆಯ ನೌಕರರ ವಿರುದ್ಧ ಶಿಸ್ತುಕ್ರಮ ಜರಗಿಸುವಂತೆ ಸರಕಾರಕ್ಕೆ ಪತ್ರ ಬರೆದಿದ್ದರು.

ರಾಜೇಂದ್ರ ನಗರದಲ್ಲಿರುವ ಪಾಲಿಕೆಗೆ ಸೇರಿದ ಪಂಪವನದಲ್ಲಿರುವ ಸಮುದಾಯ ಭವನವನ್ನು ಕಳೆದ ಹಲವು ವರ್ಷಗಳಿಂದ ಶ್ರೀರಾಮ ಮತ್ತು ಅಯ್ಯಪ್ಪಸ್ವಾಮಿ ಸೇವಾ ಸಮಿತಿಯಿಂದ ನಿರ್ವಹಣೆ ಮಾಡಿಕೊಂಡು ಬರಲಾಗುತ್ತಿದ್ದು, ಇದನ್ನು ಸಮಿತಿಯ ಒಡೆತನಕ್ಕೆ ಖಾತೆ ಮಾಡಿಕೊಡುವಂತೆ ಕೋರಿ ಸಮಿತಿಯು ಪಾಲಿಕೆಗೆ ಮನವಿ ಪತ್ರ ಸಲ್ಲಿಸಿತ್ತು. ಸದರಿ ಪ್ರದೇಶದ ವಿಸ್ತೀರ್ಣ 33x86 ಎಂಬ ಮಾಹಿತಿ ನೀಡಿತ್ತು. ಆದರೆ, ಯಾವುದೇ ಕಾರಣ ನಮೂದಿಸದೆ ಪಾಲಿಕೆಯ ದಾಖಲೆಯ ಅನುಬೋಗದಾರರ ಕಾಲಂನಲ್ಲಿ ಅನುಬೋಗದಾರರ ಹೆಸರನ್ನು ನಿಯಮಬಾಹಿರವಾಗಿ ಶ್ರೀರಾಮ ಮತ್ತು ಅಯ್ಯಪ್ಪ ಸೇವಾ ಸಮಿತಿ ಎಂಬುದಾಗಿ ಬದಲಾಯಿಸಲಾಗಿತ್ತು. ಜೊತೆಗೆ ವಿಸ್ತೀರ್ಣದಲ್ಲಿ ವ್ಯತ್ಯಾಸ ಮಾಡಲಾಗಿತ್ತು. ಮೂಲ ಅಳತೆ 33x86 ಕ್ಕೆ ಬದಲಾಗಿ, 33x136 ಎಂದು ತಿದ್ದುಪಡಿ ಮಾಡಲಾಗಿತ್ತು.

ಪಾಲಿಕೆಯ ಸೊತ್ತನ್ನು ಪಾಲಿಕೆಯ ವತಿಯಿಂದ ಸ್ಪಷ್ಟ ನಿರ್ದೇಶನ ಹಾಗೂ ಸರಕಾರದಿಂದ ಮಂಜೂರಾತಿ ಪಡೆಯದೆ ಬೇರೆಯವರ ಹೆಸರಿಗೆ ಖಾತೆ ಮಾಡಿರುವುದು ನಿಯಮಬಾಹಿರವಾಗಿದೆ. ಈ ಅಕ್ರಮದಲ್ಲಿ ಆಪಾದಿತ ನೌಕರರು ಬಾಗಿಯಾಗಿರುವುದು ಕಂಡು ಬಂದಿದ್ದು, ಇವರ ವಿರುದ್ಧ ಕ್ರಮ ಜರಗಿಸುವಂತೆ ಆಯುಕ್ತರು ಪೌರಾಡಳಿತ ನಿರ್ದೇಶನಾಲಯಕ್ಕೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದರು.

ಸಂಚಲನ: ಪಾಲಿಕೆಯ ಐವರು ಸಿಬ್ಬಂದಿ ವಿರುದ್ಧ ಪೌರಾಡಳಿತ ನಿರ್ದೇಶನಾಲಯ ಕಠಿಣ ಕ್ರಮ ಕೈಗೊಂಡಿರುವುದು ಪಾಲಿಕೆ ಆಡಳಿತದಲ್ಲಿ ಸಂಚಲನ ಮೂಡಿಸಿದೆ. ಪ್ರಭಾವಿಗಳ ರಕ್ಷಣೆಯಲ್ಲಿ ಅಕ್ರಮ, ಅವ್ಯವಹಾರದಲ್ಲಿ ಬಾಗಿಯಾಗಿರುವ ಸಿಬ್ಬಂದಿಯ ನಿದ್ದೆಗೆಡುವಂತೆ ಮಾಡಿದೆ. ಇಷ್ಟರಲ್ಲಿಯೇ ಇನ್ನೂ ಕೆಲ ಭ್ರಷ್ಟಸಿಬ್ಬಂದಿಯ ತಲೆದಂಡವಾಗುವ ಸಾಧ್ಯತೆಯಿದೆ ಎಂದು ಪಾಲಿಕೆಯ ಮೂಲಗಳು ಹೇಳುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News