ವ್ಯವಹಾರ ಪಾರ್ಕ್ ನಿರ್ಮಾಣ: ಸುಹೈಲ್ ಖಾನ್

Update: 2017-10-19 17:45 GMT

ಚಾಮರಾಜನಗರ, ಅ.19: ನಗರದ ಹೊರ ವಲಯದ ರೈಲು ನಿಲ್ದಾಣದ ಬಳಿ ಬಿಜಿನೆಸ್ ಪಾರ್ಕ್ ನಿರ್ಮಾಣ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಅರ್ಧ ಭಾಗದಷ್ಟು ಮಂದಿ ಜಮೀನು ನೀಡಲು ಒಪ್ಪಿಗೆ ನೀಡಿದ್ದಾರೆ. ಇನ್ನುಳಿದ ರೈತರಿಗೆ 50:50ರ ಅನುಪಾತದಲ್ಲಿ ಅಭಿವೃದ್ಧ್ದಿಪಡಿಸಿ ನಿವೇಶನವನ್ನು ಹಂಚಿಕೆ ಮಾಡಿ, ಬಿಝ್ ನೆಸ್ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸುಹೈಲ್ ಅಲಿ ಖಾನ್ ತಿಳಿಸಿದ್ದಾರೆ.

ನಗರದ ಜಿಲ್ಲಾಡಳಿತ ಭವನದಲ್ಲಿರುವ ನಗರಾಭಿವೃದ್ದಿ ಪ್ರಾಧಿಕಾರದ ಕಚೇರಿಯಲ್ಲಿ ನಡೆದ ನಗರಾಭಿವೃದ್ದಿ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈಗಾಗಲೇ ಬಿಜಿನೆಸ್ ಪಾರ್ಕ್ ನಿರ್ಮಾಣ ಯೋಜನೆ ಪ್ರಗತಿಯಲ್ಲಿದೆ. 15 ಎಕರೆ ಪ್ರದೇಶದಲ್ಲಿ ವ್ಯಾಪಾರಾಭಿವೃದ್ಧಿ ಕೇಂದ್ರ ನಿರ್ಮಾಣ ಮಾಡಲು ನೀಲ ನಕ್ಷೆ ತಯಾರಿಯಾಗಿದೆ. ಇದರನ್ವಯ ಜಮೀನಿನ ಮಾಲಕರ ಸಭೆ ನಡೆಸಿ ಅವರನ್ನು ಮನವೊಲಿಸುವ ಪ್ರಯತ್ನವಾಗಿ ಸಭೆಯನ್ನು ಕರೆದು ಚರ್ಚಿಸಲಾಗಿದೆ ಎಂದು ಹೇಳಿದರು.

ಪೂರ್ಣ ವರದಿಯೊಂದಿಗೆ ಜಿಲ್ಲೆಯ ಉಸ್ತುವಾರಿ ಸಚಿವರು, ಸಂಸದರು, ಶಾಸಕರಿಗೆ ಬಿಜೆನೆಸ್ ಪಾರ್ಕ್ ನಿರ್ಮಾಣದ ಕುರಿತು ಮನವಿ ಸಲ್ಲಿಸಲಾಗುವುದು. ಜಿಲ್ಲಾಧಿಕಾರಿಗಳಿಗೆ ಪೂರ್ಣ ವಿವರದೊಂದಿಗೆ ಪ್ರಸ್ತಾವ ಸಲ್ಲಿಸಿ, ಅನುಮೋದನೆಯನ್ನು ಪಡೆದುಕೊಳ್ಳಲಾಗುತ್ತದೆ. ನಗರದ ಅಭಿವೃದ್ದಿ ಹಾಗೂ ವ್ಯಾಪಾರವನ್ನು ವೃದ್ದಿಗೊಳಿಸುವ ಚಿಂತನೆ ನಮ್ಮದಾಗಿದೆ ಎಂದು ಸುಹೇಲ್ ಅಲಿ ಖಾನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News