ಯುವ ಕಾಂಗ್ರೆಸ್‌ನಿಂದ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ

Update: 2017-10-19 18:01 GMT

ಸೊರಬ, ಅ.19: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ಶಾ ಅವರ ಪುತ್ರ ಜಯ್‌ಶಾ ವಿರುದ್ಧ ಕೇಳಿ ಬಂದಿರುವ ಅಕ್ರಮ ಆಸ್ತಿ ಗಳಿಕೆ ಕುರಿತು ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ತಾಲೂಕು ಯುವ ಕಾಂಗ್ರೆಸ್ ಘಟಕದ ವತಿಯಿಂದ ಗುರುವಾರ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು.

ಅಮಿತ್‌ಶಾರ ಪುತ್ರ ಜಯ್‌ಶಾ ಒಬ್ಬ ಉದ್ಯಮಿಯಾಗಿದ್ದು, ಅಮಿತ್‌ಶಾ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಆಗುವ ಪೂರ್ವದಲ್ಲಿ ಮಗನ ಕಂಪೆನಿಯ ವಹಿವಾಟು ನಷ್ಟದಲ್ಲಿರುವ ಬಗ್ಗೆ ತಿಳಿದು ಬಂದಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಒಂದೇ ವರ್ಷದಲ್ಲಿ ಅವರ ಪುತ್ರ ಜಯ್‌ಶಾ ಕಂಪೆನಿಯ ವಹಿವಾಟು 16 ಸಾವಿರ ಪಟ್ಟು ಹೆಚ್ಚಳವಾಗಿರುವ ಬಗ್ಗೆ ಪ್ರಚಾರವಾಗುತ್ತಿದೆ. ಪ್ರಚಾರದಿಂದಲೇ ಜನಪ್ರಿಯವಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.

2015-16ರ ಅವಧಿ, ಅದರ ಜಯ್‌ಶಾ ಮಾಲಕತ್ವದ ಟೆಂಪಲ್ ಎಂಟರ್ ಪ್ರೈಸಸ್ಸ್ ಆದಾಯ ಹಿಂದಿನ ವರ್ಷಕ್ಕಿಂತ 16 ಸಾವಿರ ಪಟ್ಟು ಹೆಚ್ಚಳವಾಗಿದೆ ಎಂಬ ಕಂಪೆನಿಗಳ ರಿಜಿಸ್ಟ್ರಾರ್‌ಗೆ ಸಲ್ಲಿಸಿದ ದಾಖಲೆಗಳ ಆಧಾರದಲ್ಲಿ ಮಾಧ್ಯಮದಲ್ಲಿ ವರದಿಯಾಗಿರುವುದು.ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಏಜೆನ್ಸಿಯಿಂದ ರೂ. 10.35 ಕೋಟಿ ಸಾಲ ನೀಡಿರುವುದು. ಜಯ್‌ಶಾ ಶೇ. 60% ಪಾಲುದಾರಿಕೆ ಹೊಂದಿರುವ ಕುಸುಮ್ ಫಿನ್‌ಸರ್ವ್ ಎಲ್‌ಎಲ್‌ಪಿ ಎಂಬ ಷೇರು ವ್ಯಾಪಾರದ ಕಂಪೆನಿಗೆ ಮಧ್ಯಪ್ರದೇಶದ ಪವನಶಕ್ತಿ ಯೋಜನೆಯ ಗುತ್ತಿಗೆ ನೀಡಿರುವ ಕುರಿತು ಕೇಳಿ ಬಂದಿರುವ ಆರೋಪಗಳ ಕುರಿತು ವರದಿಯಾಗಿದೆ. ಈ ಎಲ್ಲಾ ಅಂಶಗಳ ಕುರಿತು ಸೂಕ್ತ ತನಿಖೆ ನಡೆಸುವಂತೆ ಕೇಂದ್ರ ಸರಕಾರಕ್ಕೆ ಸೂಚನೆ ನೀಡಲು ರಾಷ್ಟ್ರಪತಿಯವರು ಶಿಫಾರಸು ಮಾಡುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಎನ್.ಎಸ್.ಯು.ಐ. ಅಧ್ಯಕ್ಷ ಶಶಿಕುಮಾರ್, ಕಾಂಗ್ರೆಸ್ ಯುವ ಘಟಕದ ತಾಲೂಕು ಅಧ್ಯಕ್ಷ ಎಂ. ಕರುಣಾಕರ, ಪದಾಧಿಕಾರಿಗಳಾದ ಸಂತೋಷ ಪುರ, ಮನೋಜ್ ಹೊಸೂರು, ಸಚಿನ್, ದೀಪಕ್, ಚಿದಾನಂದ, ಶ್ರೀಕಾಂತ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News