×
Ad

ಸದಾಶಿವ ಆಯೋಗದ ವರದಿ ಜಾರಿಗೊಳಿಸುವಂತೆ ಒತ್ತಾಯಿಸಿ 25ರಂದು ರಾಜ್ಯಾದ್ಯಂತ ಜನಾಂದೋಲನಾ ರ್ಯಾಲಿ

Update: 2017-10-19 23:39 IST

ದಾವಣಗೆರೆ, ಅ.19: ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ಅಕ್ಟೋಬರ್ 25ರಂದು ರಾಜ್ಯಾದ್ಯಂತ ಜನಾಂದೋಲನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಡಾ.ಎನ್.ಮೂರ್ತಿ ತಿಳಿಸಿದರು. 

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾದಿಗ ಸಮುದಾಯ ಸೇರಿದಂತೆ ಇತರೆ ಅಸ್ಪøಶ್ಯ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲಿಕ್ಕಾಗಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ
ಅಂಗೀಕರಿಸಿ, ಇದರ ಅನುಷ್ಠಾನಕ್ಕೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಒತ್ತಾಯಿಸಿ ಅ.25ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಧರಣಿ ಆಯೋಜಿಸುವ ಮೂಲಕ ಜನಾಂದೋಲನ ರ್ಯಾಲಿ ನಡೆಸಲಾಗುವುದು. ಅದರಂತೆ ದಾವಣಗೆರೆಯಲ್ಲೂ ಅಂದು
ಬೆಳಿಗ್ಗೆ 11.30 ನಗರದ ಅಂಬೇಡ್ಕರ್ ವೃತ್ತದಿಂದ ಎಸಿ ಕಚೇರಿಯ ವರೆಗೆ ಪ್ರತಿಭಟನೆ ನಡೆಸಿ ಉಪ ವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು. 

ಪರಿಶಿಷ್ಟ ಜಾತಿಯ ಒಳ ಮೀಸಲಾತಿ ವರ್ಗೀಕರಣಕ್ಕಾಗಿ ನೇಮಕಗೊಂಡಿದ್ದ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗವು ರಾಜ್ಯಾದ್ಯಂತ ಪ್ರವಾಸ ನಡೆಸಿ, ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಎಲ್ಲ ಜಾತಿಗಳ ಸ್ಥಿತಿಗತಿಯ ಬಗ್ಗೆ ಸಮೀಕ್ಷೆ ನಡೆಸಿ, ಮಾದಿಗ ಸಮಾಜ
ಸೇರಿದಂತೆ ಇತರೆ ಅಸ್ಪೃಶ್ಯ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಬೇಕೆಂದು ಶಿಫಾರಸು ಮಾಡಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿ, ಸುಮಾರು 6 ವರ್ಷಗಳು ಕಳೆದಿವೆ. ಆದರೆ, ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ಹಾಗೂ ಈಗಿನ ಕಾಂಗ್ರೆಸ್ ಸರ್ಕಾರಸಹ ಈ ವರದಿಯನ್ನು
ಅಂಗೀಕರಿಸಲು ಮೀಣ ಮೇಷ ಎಣಿಸುತ್ತಿವೆ ಎಂದು ಆರೋಪಿಸಿದರು. 

ಕಾಂಗ್ರೆಸ್ ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಈ ವರದಿಯನ್ನು ಅಂಗೀಕರಿಸಿ ತಳಸಮುದಾಯಗಳಿಗೆ ಸಮಾಜಿಕ ನ್ಯಾಯ ಕಲ್ಪಿಸದಿದ್ದರೆ, ಮುಂದಿನ ಚುನಾವಣೆಯಲ್ಲಿ ನಮ್ಮ ಸಮಾಜ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲಿದೆ ಎಂದು ಎಚ್ಚರಿಸಿದರು. 

ಪರಿಶಿಷ್ಟ ನೌಕರರ ಬಡ್ತಿ ಮೀಸಲಾತಿಗಾಗಿ ರಾಜ್ಯ ಸರ್ಕಾರ ಸುಗ್ರಿವಾಜ್ಞೆ ಹೊರಡಿಸಬೇಕು. ಕಾಂತರಾಜ್ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಿ ಎಲ್ಲಾ ಜಾತಿಗಳಿಗೂ ಜನಸಂಖ್ಯೆಗೆ ಅನುಗುಣವಾಗಿ ಜಾತಿವಾರು ಮೀಸಲಾತಿ ನಿಗದಿ ಮಾಡಬೇಕು. ಬಗುರ ಹುಕ್ಕುಂ
ಸಾಗುವಳಿಯನ್ನು ಸಕ್ರಮಗೊಳಿಸಿ ಹಕ್ಕುಪತ್ರ ವಿತರಿಸಬೇಕು. ಈಗಿರುವ ಮೀಸಲಾತಿ ಪ್ರಮಾಣವನ್ನು ಶೇ.50ರಿಂದ ಶೇ.70ಕ್ಕೆ ಹೆಚ್ಚಿಸಬೇಕು. ದಿನಗೂಲಿ ನೌಕರರಾಗಿದುಡಿಯುತ್ತಿರುವ ಪೌರ ಕಾರ್ಮಿಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಹಾಸ್ಟೆಲ್, ಬಿಸಿಯೂಟ ಅಡುಗೆ ತಯಾರಕರನ್ನು, ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯ್ತಿಗಳಲ್ಲಿ ದುಡಿಯುತ್ತಿರುವ ದಿನಗೂಲಿ ನೌಕರರನ್ನು ಖಾಯಂ ಗೊಳಿಸಬೇಕೆಂದು ಒತ್ತಾಯಿಸಿದರು.  

ಸುದ್ದಿಗೋಷ್ಠಿಯಲ್ಲಿ ದಂಸದ ಜಿಲ್ಲಾಧ್ಯಕ್ಷ ಮಲ್ಲೇಶ್ ಕುಕ್ಕುವಾಡ, ಹೆಗ್ಗೆರಂಗಪ್ಪ, ಆಲೂರು ನಿಂಗರಾಜ್, ಸಿ.ಬಸವರಾಜ್, ರೇಣುಕಾ ಯಲ್ಲಮ್ಮ,
ಶಬೀರ್‍ಸಾಬ್, ಹರಪನಹಳ್ಳಿ ಕುಬೇರಪ್ಪ ಮತ್ತಿತರರು ಹಾಜರಿದ್ದರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News