ಕೈ ಉತ್ಪನ್ನಗಳಲ್ಲಿ ತಳ ಸಮುದಾಯದ ಬದುಕಿದೆ: ಆರ್.ರಾಮಚಂದ್ರ

Update: 2017-10-20 12:51 GMT

ಬೆಂಗಳೂರು, ಅ.20: ಕೈ ಉತ್ಪನ್ನಗಳನ್ನು ತಯಾರಿಸುವವರು ತಮ್ಮ ಜೀವನೋಪಾಯಕ್ಕೆ ಈ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆಯೇ ವಿನಃ ಲಾಭಗಳಿಕೆಗಲ್ಲ. ಆದರೂ ಕೇಂದ್ರ ಸರಕಾರ ಕೈ ಉತ್ಪನ್ನಗಳ ಮೇಲೆ ತೆರಿಗೆ ಹಾಕುವ ಮೂಲಕ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಅಖಿಲ ಕರ್ನಾಟಕ ಕೊರಮ-ಕೊರಚ ಮಹಾ ಸಂಘದ ರಾಜ್ಯಾಧ್ಯಕ್ಷ ಆರ್.ರಾಮಚಂದ್ರ ಕಿಡಿಕಾರಿದ್ದಾರೆ.

ಕೈ ಉತ್ಪನ್ನಗಳು ಕೇವಲ ಒಂದು ವಸ್ತುವಾಗಿ ನೋಡುವುದರಲ್ಲಿಯೇ ಅಪಾಯವಿದೆ. ಒಂದೊಂದು ಕೈ ಉತ್ಪನ್ನದ ಒಳಗೆ ಈ ದೇಶದ ತಳ ಸಮುದಾಯದ ಬದುಕು, ಸಂಸ್ಕೃತಿ ಅಡಗಿದೆ. ಹಾಗೂ ಸಾವಿರಾರು ವರ್ಷಗಳಿಂದಲೂ ಜನ ಸಮುದಾಯದೊಳಗೆ ಹಾಸು ಹೊಕ್ಕಾಗಿದೆ. ಈ ಉತ್ಪನ್ನಗಳ ಕುರಿತು ಕೇಂದ್ರ ಸರಕಾರಕ್ಕೆ ಸರಿಯಾದ ತಿಳುವಳಿಕೆ ನೀಡುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಕೋರಮ ಸಮುದಾಯ ಕೈ ಉತ್ಪನ್ನಗಳಾದ ಮರ, ಮಕ್ಕರಿ, ಬುಟ್ಟಿ, ತೊಟ್ಟಿಲು ಸೇರಿದಂತೆ ಮನೆ ಉಪಯೋಗಿ ಹಾಗೂ ಕೃಷಿಗೆ ಸಂಬಂಧಿಸಿದ ಉತ್ಪನ್ನಗಳನ್ನು ತಯಾರಿಸಿಕೊಂಡು ಜೀವನೋಪಾಯ ನಡೆಸುತ್ತಿದೆ. ಇವರ್ಯಾರು ದೊಡ್ಡ ಉದ್ಯಮಿದಾರರಲ್ಲ. ಹಳ್ಳಿಗಾಡಿನಲ್ಲಿ ತಮ್ಮ ಪಾಡಿಗಾಗಿ ಕೈ ಉತ್ಪನ್ನಗಳನ್ನು ಮಾಡುತ್ತಾ ಇತರೆ ಸಮುದಾಯಗಳ ಜೊತೆ ಸಹಬಾಳ್ವೆ ಜೀವನ ನಡೆಸುವಂತವರಾಗಿದ್ದು, ಇವರು ತಯಾರಿಸುವ ಉತ್ಪನ್ನಗಳ ಮೇಲೆ ತೆರಿಗೆ ಹಾಕಿದರೆ ಸಮುದಾಯಗಳ ಸೃಜನಶೀಲ ಬದುಕೇ ನಾಶವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರಸನ್ನ ಹೋರಾಟಕ್ಕೆ ಬೆಂಬಲ: ಕೈ ಉತ್ಪನ್ನಗಳಿಗೆ ಮಾನ್ಯತೆ ಕೊಟ್ಟು ತೆರಿಗೆಯಿಂದ ವಿನಾಯಿತಿಗೆ ಆಗ್ರಹಿಸಿ ಹಿರಿಯ ರಂಗಕರ್ಮಿ ಪ್ರಸನ್ನ ನಡೆಸುತ್ತಿರುವ ಹೋರಾಟಕ್ಕೆ ಅಖಿಲ ಕರ್ನಾಟಕ ಕೊರಮ-ಕೊರಚ ಮಹಾ ಸಂಘವು ಬೆಂಬಲಿಸಲಿದೆ. ಅವರು ಮುಂದೆ ನಡೆಸುವ ಎಲ್ಲ ಹೋರಾಟಗಳಲ್ಲೂ ಭಾಗವಹಿಸಲಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News