×
Ad

ಪೊಲೀಸರ ಮೇಲೆ ಹಲ್ಲೆ: ಮೂವರ ಬಂಧನ

Update: 2017-10-20 19:54 IST

ನಾಗಮಂಗಲ, ಅ.20: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ವಾಹನಗಳನ್ನು ತಡೆಯಲು ಯತ್ನಿಸಿದ ಪೊಲೀಸರ ಮೇಲೆಯೇ ಹಲ್ಲೆ ನಡೆದಿರುವ ಘಟನೆ ತಾಲೂಕಿನ ಕೊರವನಗುಂದಿ ಗ್ರಾಮದ ಬಳಿ ನಡೆದಿದೆ.

ಖಚಿತ ಮಾಹಿತಿಯ ಮೇರೆಗೆ, ಜಿಲ್ಲಾ ಕೇಂದ್ರದ ಪೊಲೀಸ್ ವಿಶೇಷ ತಂಡದ ನಾಲ್ಕು ಜನ ಪೊಲೀಸರು ಎರಡು ಬೈಕ್‍ಗಳಲ್ಲಿ ಅ.16ರಂದು ತಡರಾತ್ರಿ ಬೊಗಾದಿ-ಮೇಲುಕೋಟೆ ರಸ್ತೆಯ ಮಾರ್ಗದಲ್ಲಿ ಸಾಗಿಸುತ್ತಿದ್ದ ಮರಳು ತುಂಬಿದ 2 ಟ್ರ್ಯಾಕ್ಟರ್‍ಗಳನ್ನು ತಡೆದಿದ್ದಾರೆ. ಮರಳು ತುಂಬಿದ ಟ್ರ್ಯಾಕ್ಟರ್‍ಗಳನ್ನು 2 ಕಾರು ಮತ್ತು 2 ಬೈಕ್‍ಗಳಲ್ಲಿ ಹಿಂಬಾಲಿಸುತ್ತಿದ್ದ 15 ಜನರ ತಂಡ ಏಕಾಏಕಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು, ಗುರು ಮತ್ತು ದೇವರಾಜ್ ಎಂಬವರಿಗೆ ಗಾಯಾಗಿದೆ. ಉಳಿದಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ವಿಷಯ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆಯ ಮೇರೆಗೆ, ಸ್ಥಳಕ್ಕಾಗಮಿಸಿದ ಮೇಲುಕೋಟೆ ಠಾಣೆಯ ಪೊಲೀಸರನ್ನು ಕಂಡು ದುಷ್ಕರ್ಮಿಗಳು ಕಾರು, ಬೈಕ್, ಟ್ರ್ಯಾಕ್ಟರ್‍ಗಳನ್ನು ಬಿಟ್ಟು ಪರಾರಿಯಾಗಿದ್ದಾರೆ. ವಾಹನಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಹಲ್ಲೆ ನಡೆಸಿದರೆನ್ನಲಾದ ಕೊರವನಗುಂದಿ ಗ್ರಾಮದ ಶಿವಣ್ಣ ಅವರ ಪುತ್ರ ಕೆ.ಎಸ್.ಮಂಜು, ಶ್ರೀನಿವಾಸಗೌಡ ಅವರ ಪುತ್ರ ಕೆ.ಎಸ್.ಮಂಜು ಮತ್ತು ಶ್ರೀನಿವಾಸಯ್ಯ ಎಂಬವರನ್ನು ಗುರುವಾರ ತಡರಾತ್ರಿ ಬಂಧಿಸಿದ್ದು, ನ್ಯಾಯಾಲಧೀಶರು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ.

ಇತರ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದು, ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲೂಕಿನಲ್ಲಿ ಅಕ್ರಮ ಮರಳು ದಂಧೆ ಹಾಗೂ ಪೊಲೀಸರು ಮತ್ತು ಅಧಿಕಾರಿಗಳ ಮೇಲೆ ಹಲ್ಲೆ ಹೊಸದೇನಲ್ಲ. ಫಿಲ್ಟರ್ ಮರಳು ಅಡ್ಡೆ ಮೇಲೆ ದಾಳಿ ನಡೆಸಿದ್ದ ತಹಶೀಲ್ದಾರ್ ಡಾ.ಎಚ್.ಎಲ್.ನಾಗರಾಜು, ಸಿಪಿಐ ವಸಂತಕುಮಾರ್ ಅವರ ಮೇಲೂ ಇದೇ ಕೊರವನಗುಂದಿ ಗ್ರಾಮದ ಹೊರವಲಯದಲ್ಲಿ ಹಲ್ಲೆ ನಡೆದಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News