×
Ad

ಮಾನವ ಹಕ್ಕುಗಳ ಹೋರಾಟಗಾರ್ತಿ ಮೇಲೆ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ: ಆರೋಪ

Update: 2017-10-20 20:33 IST

ಬೆಂಗಳೂರು, ಅ.20: ಮಾನವ ಹಕ್ಕುಗಳ ಹೋರಾಟಗಾರ್ತಿ ಮೇಲೆ ಬಿಜೆಪಿ ಮುಖಂಡನೊಬ್ಬನ ಬೆಂಬಲಿಗರು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿರುವ ಆರೋಪ ಇಲ್ಲಿನ ಕೆಪಿ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಳಿ ಬಂದಿದೆ.

ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘದ ಕರ್ನಾಟಕ ದಕ್ಷಿಣ ವಲಯದ ಅಧ್ಯಕ್ಷೆ ವಿಜಯನಗರ ಬಳಿಯ ಚೋಲೂರುಪಾಳ್ಯದ ನಿವಾಸಿ ಟಿ. ಮಹಾಲಕ್ಷ್ಮಿ ಮೇಲೆ ಮೂವರು ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಟಿ.ಮಹಾಲಕ್ಷ್ಮಿ, ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಬಿಬಿಎಂಪಿಯ ಮಾಜಿ ಸದಸ್ಯ, ಬಿಜೆಪಿ ಮುಖಂಡ ರವೀಂದ್ರ ಬೆಂಬಲಿಗರಾದ ನವೀನ್, ರೋಹಿತ್ ಹಾಗೂ ಮತ್ತೋರ್ವ ಅಪರಿಚಿತ ಏಕಾಏಕಿ ಕಚೇರಿಗೆ ನುಗ್ಗಿ ನನ್ನ ಬಾಯಿ ಮುಚ್ಚಿ, ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಪರಾರಿಯಾಗಿದ್ದಾರೆ ಎಂದು ಆರೋಪಿಸಿದರು.

ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಹಲ್ಲೆ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ. ಮಹಿಳೆ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದು, ಹಲ್ಲೆಗೆ ಕಾರಣ ಎನ್ನಲಾಗಿದೆ. ಅಲ್ಲದೆ, ಈ ಹಿಂದೆಯೂ ಬಿಜೆಪಿ ಮುಖಂಡ ರವೀಂದ್ರ ಬೆಂಬಲಿಗರು ನನ್ನ ಮೇಲೆ ಹಲ್ಲೆ ನಡೆಸಿದ್ದರು ಎಂದು ದೂರಿದರು.

ಘಟನೆಯಲ್ಲಿ ಟಿ.ಮಹಾಲಕ್ಷ್ಮಿ ತೀವ್ರವಾಗಿ ಗಾಯಗೊಂಡಿದ್ದು, ಇಲ್ಲಿನ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಕೆಪಿ ಅಗ್ರಹಾರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News