ಚುನಾವಣೆಗೆ ತನ್ನ ಕುಟುಂಬದ ಸದಸ್ಯರ ಸ್ಪರ್ಧೆ ಇಲ್ಲ: ಅಂಬರೀಶ್
Update: 2017-10-20 22:13 IST
ಮಂಡ್ಯ, ಅ.20: ತಮ್ಮ ಕುಟುಂಬದ ಸದಸ್ಯರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಚಿವ, ಶಾಸಕ ಅಂಬರೀಶ್ ಹೇಳಿದ್ದಾರೆ.
ಖಾಸಗಿ ಕಾರ್ಯಕ್ರಮಕ್ಕೆ ಶುಕ್ರವಾರ ಆಗಮಿಸಿದ್ದ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, ತನ್ನ ಪುತ್ರ ರಾಜಕೀಯಕ್ಕೆ ಬರುವುದಿಲ್ಲ. ಆತನ ಸಿನೆಮಾ ಸದ್ಯದಲ್ಲೇ ಸೆಟ್ಟೇರಲಿದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಕಾಂಗ್ರೆಸ್ ಸರಕಾರದ ಸಾಧನೆಗಳನ್ನು ಮತದಾರರಿಗೆ ತಲುಪಿಸಲು ಹಮ್ಮಿಕೊಂಡಿರುವ ಮನೆಮನೆಗೆ ಕಾಂಗ್ರೆಸ್ ಆಂದೋಲನದಲ್ಲಿ ಪಾಲ್ಗೊಳ್ಳಲು ಜಿಲ್ಲೆಗೆ ಆಗಮಿಸುವುದಾಗಿ ಇದೇ ವೇಳೆ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷಗಾದಿಗೆ ನಾಲ್ಕು ಮಂದಿ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದ್ದು, ಅಂತಿಮ ತೀರ್ಮಾನ ವರಿಷ್ಠರದ್ದು. ಮೈಷುಗರ್ ಅಧ್ಯಕ್ಷ ಸ್ಥಾನಕ್ಕೆ ಸದ್ಯಕ್ಕೆ ನೇಮಕವಿಲ್ಲ ಎಂದು ಪ್ರತಿಕ್ರಿಯಿಸಿದರು.