ಮಕ್ಕಳಲ್ಲಿ ಔಷಧ ಪ್ರತಿರೋಧಕತೆಯ ಸವಾಲುಗಳು

Update: 2017-10-21 16:53 GMT

ಔಷಧಿಗಳು ಖಾಯಿಲೆ ಗುಣಪಡಿಸಲು ಇರುವವುಗಳೇ ಹೊರತು ಹೊಟ್ಟೆ ತುಂಬಿಸಲು ಅಥವಾ ಹಸಿವು ನೀಗಿಸಲು ಇರುವಂತಹದ್ದಲ್ಲ ಎಂಬ ಸತ್ಯ ನಮ್ಮ ವೈದ್ಯರಿಗೆ ಅರ್ಥವಾಗುವಷ್ಟು ಕಾಲ ನಮ್ಮ ಜನರ ಹೊಟ್ಟೆಗಳು ಔಷಧಿಗಳನ್ನು ತುಂಬುವ ಡಸ್ಟ್‌ಬಿನ್‌ಗಳಾಗಿರುತ್ತವೆ. ಪುಟಾಣಿ ಕಂದಮ್ಮಗಳ ಹೊಟ್ಟೆಗಳನ್ನು ಔಷಧಿಗಳನ್ನು ತುಂಬಿಸುವ ತೊಟ್ಟಿಯಾಗಿಸಿರುವ ವೈದ್ಯರಂತೂ ನಮ್ಮ ಮುಂದಿನ ತಲೆಮಾರುಗಳನ್ನು ರೋಗ ನಿರೋಧಕತೆ ರಹಿತ ತಲೆಮಾರಾಗಿಸುವ ಅಪಾಯ ಈ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ. ಮಕ್ಕಳ ತಜ್ಞರು ಕೇವಲ ಓರ್ವ ವೈದ್ಯನ ದೃಷ್ಟಿಕೋನ ಮಾತ್ರವಲ್ಲದೇ ಓರ್ವ ತಂದೆ/ತಾಯಿಯ ದೃಷ್ಟಿಕೋನದಲ್ಲಿ ತಮ್ಮ ರೋಗಿಗಳನ್ನು ನೋಡಲು ಪ್ರಾರಂಭಿಸಿದರೆ ಮಾತ್ರ ಇಂತಹ ಅಪಾಯಗಳಿಂದ ನಮ್ಮ ಮಕ್ಕಳನ್ನು ರಕ್ಷಿಸಬಹುದು.

ಇತ್ತೀಚೆಗೆ ನನ್ನ ಪರಿಚಯಸ್ಥರೊಬ್ಬರ ಕೈಯಲ್ಲಿದ್ದ ವೈದ್ಯರ ಚೀಟಿಯನ್ನು ಗಮನಿಸಿದೆ. ಇದು ಯಾರಿಗೆ ಔಷಧಿ ಚೀಟಿಯೆಂದು ಪ್ರಶ್ನಿಸಿದೆ? ನನ್ನ ಮಗುವಿಗೆ ಎಂದರು. ನಿಮ್ಮ ಮಗುವಿಗೆ ವಯಸ್ಸೆಷ್ಟು ಎಂದು ಪ್ರಶ್ನಿಸಿದೆ. ಅವರು ಎರಡೂವರೆ ವರ್ಷ ಎಂದರು. ಆ ಬಳಿಕ ಅವರು ಮಗುವಿನ ಲ್ಯಾಬ್ ರಿಪೋರ್ಟ್, ಎಕ್ಸ್‌ರೇ ತೋರಿಸಿದರು. ಅವೆಲ್ಲವೂ ನಾರ್ಮಲ್ ಇತ್ತು. ಮಗುವಿನ ಖಾಯಿಲೆಯೇನೆಂದು ಕೇಳಿದಾಗ ಅವರು ನೀಡಿದ ಉತ್ತರ ನೆಗಡಿ ಮತ್ತು ಜ್ವರ. ಎಷ್ಟು ದಿನದಿಂದ ಎಂದದ್ದಕ್ಕೆ ಮೂರು ದಿನದಿಂದ ಎಂದರು. ಎಲ್ಲಾ ರಿಪೋರ್ಟ್‌ಗಳನ್ನು ನೋಡಿದ ಮಕ್ಕಳ ತಜ್ಞರೊಬ್ಬರು ಆ ಮಗುವಿಗೆ ಬರೋಬ್ಬರಿ ಏಳು ವಿಧದ ಔಷಧಿ ಬರೆದು ಕೊಟ್ಟಿದ್ದರು. ಆ ಮಗುವಿನ ಖಾಯಿಲೆಯ ತೀವ್ರತೆಯನ್ನನುಸರಿಸಿ ವೈದ್ಯರು ಆ ಚೀಟಿ ಬರೆದು ಕೊಟ್ಟಿರಲೂಬಹುದು. ಆ ಬಗ್ಗೆ ತಕರಾರೆತ್ತಲು ನಾನು ಯಾರೂ ಅಲ್ಲ. ನಾನೋರ್ವ ಅರೆವೈದ್ಯಕೀಯ ವೃತ್ತಿಪರನೆಂಬ ನೆಲೆಯಲ್ಲಿ ಪ್ರತಿನಿತ್ಯ ಹಲವಾರು ವೈದ್ಯರ ಔಷಧಿ ಚೀಟಿಗಳನ್ನು ನನ್ನ ಕುತೂಹಲಕ್ಕಾಗಿ ಗಮನಿಸುತ್ತಿರುತ್ತೇನೆ.

ಕೆಲವು ವೈದ್ಯರು ಚೀಟಿಯಲ್ಲಿ ಅರೆ ಇಂಚು ಜಾಗವನ್ನೂ ಖಾಲಿ ಬಿಡಬಾರದೆಂಬ ಧೋರಣೆಯಲ್ಲಿ ಔಷಧಿ ಬರೆದಂತಿರುತ್ತದೆ. ಪ್ರೌಢ ವಯಸ್ಕರು ಹೇಗಾದರೂ ಔಷಧಿಗಳನ್ನು ಸ್ವತಃ ಸೇವಿಸುತ್ತಾರೆ. ಆದರೆ ಪುಟಾಣಿ ಮಕ್ಕಳಿಗೆ ಔಷಧಿ ಕುಡಿಸುವ ಕಷ್ಟ ಹೆತ್ತವರಿಗೆ ಮಾತ್ರ ಗೊತ್ತು. ಇದನ್ನು ನಾನೋರ್ವ ವೈದ್ಯಕೀಯ ವಿಮರ್ಶಕನಾಗಿ ಬರೆಯುತ್ತಿಲ್ಲ. ಪುಟ್ಟ ಮಗುವೊಂದರ ಅಪ್ಪನಾಗಿ ಬರೆಯುತ್ತಿದ್ದೇನೆ. ಕೆಲವು ಮಕ್ಕಳ ತಜ್ಞರು ಮಕ್ಕಳಿಗೆ ಆರೇಳು ವಿಧದ ಔಷಧಿಗಳನ್ನು ಬರೆಯುವುದನ್ನು ಗಮನಿಸಿದ್ದೇನೆ. ಅವರು ಜ್ವರಕ್ಕೊಂದು, ನೆಗಡಿಗೊಂದು, ಕೆಮ್ಮಿಗೊಂದು, ಕಫಕ್ಕೊಂದು, ವಾಂತಿಗೊಂದು ಮತ್ತು ಇಷ್ಟು ವಿಧದ ಔಷಧಿಗಳ ಸೇವನೆಯಿಂದ ಮಗುವಿಗೆ ಆ್ಯಸಿಡಿಟಿ ಆಗದಿರಲೆಂದು ಮತ್ತೊಂದು, ಹೀಗೆ ಉದ್ದಕ್ಕೆ ಔಷಧಿ ಬರೆಯುತ್ತಾ ಹೋಗುತ್ತಾರೆ. ಎರಡು ಮೂರು ಖಾಯಿಲೆಗೆ ನೀಡಬಲ್ಲ ಸಂಯುಕ್ತ ಔಷಧಿಗಳು ಲಭ್ಯವಿರುವಾಗ ಇಷ್ಟುದ್ದ ಔಷಧಿಗಳನ್ನು ಯಾಕೆ ಬರೆಯುತ್ತಾರೆಂಬ ಯಕ್ಷ ಪ್ರಶ್ನೆ ನನ್ನನ್ನು ಸದಾ ಕಾಡುತ್ತಿರುತ್ತದೆ. ಸಂಯುಕ್ತ ಔಷಧಿಗಳ ಬಗ್ಗೆ ಎಲ್ಲಾ ವೈದ್ಯರಿಗೂ ತಿಳಿದಿರುತ್ತದೆ. ಅದಾಗ್ಯೂ ಹೀಗ್ಯಾಕೆ?

ಈ ರೀತಿ ಉದ್ದಕ್ಕೆ ಔಷಧಿ ಚೀಟಿಗಳನ್ನು ತುಂಬಿಸುವುದರಿಂದ ಆಗುವ ಅತೀ ದೊಡ್ಡ ಅಪಾಯ ಔಷಧ ಪ್ರತಿರೋಧಕತೆ. ಅದು ಹೇಗೆಂದರೆ ಸಾಮಾನ್ಯವಾಗಿ ಯಾವ ಮಕ್ಕಳೂ ಔಷಧಿ ಸೇವಿಸಲು ಒಪ್ಪುವುದಿಲ್ಲ. ಮಗು ರಂಪ ಮಾಡುತ್ತದೆಂದು ಒಂದೆರಡು ದಿನಗಳಲ್ಲಿ ರೋಗಲಕ್ಷಣಗಳು ಕಡಿಮೆಯಾದರೆ ಹೆತ್ತವರು ಔಷಧಿ ನಿಲ್ಲಿಸುತ್ತಾರೆ. ಹೀಗೆ ಆ್ಯಂಟಿಬಯೋಟಿಕ್‌ಗಳನ್ನು (ಸೋಂಕು ನಿವಾರಕಗಳು) ಪದೇ ಪದೇ ಅವಧಿ ಪೂರ್ತಿಗೊಳಿಸದೇ ಅರ್ಧಕ್ಕೆ ನಿಲ್ಲಿಸಿದರೆ ಕ್ರಮೇಣ ಆ ಮಕ್ಕಳಲ್ಲಿ ಅರ್ಧಕ್ಕೆ ನಿಲ್ಲಿಸಿದ ಸೋಂಕು ನಿವಾರಕಗಳಿಗೆ ಪ್ರತಿರೋಧಕ ಶಕ್ತಿ ಬೆಳೆಯುತ್ತದೆ. ಹೀಗೆ ಹಲವು ಆ್ಯಂಟಿಬಯೋಟಿಕ್‌ಗಳಿಗೆ ಮಕ್ಕಳಲ್ಲಿ ಪ್ರತಿರೋಧಕ ಶಕ್ತಿ ಬೆಳೆದರೆ ಮುಂದೆ ಆ ಮಕ್ಕಳ ರೋಗ ನಿರೋಧಕ ಶಕ್ತಿ ಕುಂಠಿತಗೊಳ್ಳುವ ಬಹುದೊಡ್ಡ ಅಪಾಯವಿದೆ. ಇಂತಹದ್ದರಿಂದ ಮುಂದಿನ ಜನಾಂಗ ರೋಗ ನಿರೋಧಕತೆ ರಹಿತ ಜನಾಂಗವಾಗಿ ಮಾರ್ಪಡಲು ಹೇತುವಾದೀತು. ಅನೇಕ ಸಂದರ್ಭಗಳಲ್ಲಿ ಇನ್ನೊಂದು ಸಮಸ್ಯೆಯೂ ಎದುರಾಗುತ್ತದೆ. ಮಕ್ಕಳ ಬಾಯಿಗೆ ಬಲವಂತವಾಗಿ ಔಷಧಿಯನ್ನು ಹಾಕುವುದಿದೆ. ಅನೇಕ ಮಕ್ಕಳಿಗೆ ಔಷಧಿಗಳು ಗಂಟಲಿನಿಂದ ಕೆಳಗಿಳಿಯುವ ಮುನ್ನವೇ ವಾಂತಿಯಾಗುತ್ತದೆ. ಈ ರೀತಿ ವಾಂತಿಯಾಗುವ ಔಷಧಿಗಳಲ್ಲಿ ಆ್ಯಂಟಿಬಯೋಟಿಕ್‌ಗಳೂ ಇರಬಹುದು. ಹೆತ್ತವರು ವೈದ್ಯರ ಸೂಚನೆಯಂತೆ ನಿಗದಿತ ಅವಧಿಯವರೆಗೆ ಔಷಧಿ ನೀಡಿದ್ದರೂ ಗಂಟಲಿಗಿಳಿಯುವ ಮುನ್ನವೇ ವಾಂತಿಯಾಗುವ ಔಷಧಿಗಳ ಲೆಕ್ಕ ಯಾರು ಇಟ್ಟುಕೊಳ್ಳುತ್ತಾರೆ? ಆ್ಯಂಟಿಬಯೋಟಿಕ್‌ಗಳ ಅವಧಿ ಪೂರ್ತಿಯಾಗಿದೆಯೆಂದು ಏನು ಗ್ಯಾರಂಟಿ?

ವಿಶ್ವ ಆರೋಗ್ಯ ಸಂಸ್ಥೆಯ ನಿಯಮಾವಳಿ ಪ್ರಕಾರ ಎರಡು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ನೆಗಡಿ ನಿವಾರಕ ಔಷಧಿ ನೀಡುವಂತಿಲ್ಲ. (ಮೂಗಿಗೆ ಹಾಕುವ ಹನಿ ನೀಡಬಹುದಷ್ಟೆ) ಇಂತಹ ಹತ್ತಾರು ನಿಯಮಾವಳಿಗಳು ಕೇವಲ ಕಡತಕ್ಕೆ ಮಾತ್ರ ಸೀಮಿತ. ಮಕ್ಕಳ ತಜ್ಞರು ವೈದ್ಯರ ದೃಷ್ಟಿಕೋನಕ್ಕಿಂತ ಹೆತ್ತವರ ದೃಷ್ಟಿಕೋನದಲ್ಲಿ ನೋಡಬೇಕೆನ್ನುವುದಕ್ಕೆ ಇದೇ ಕಾರಣ. ವೈದ್ಯರು ಸ್ವಲ್ಪ ಪ್ರಾಯೋಗಿಕವಾಗಿ ಯೋಚಿಸಿದರೆ ಇಂತಹ ಅಪಾಯಗಳನ್ನು ಕಡಿಮೆಗೊಳಿಸಬಹುದು.
 

Writer - ಇಸ್ಮತ್ ಫಜೀರ್

contributor

Editor - ಇಸ್ಮತ್ ಫಜೀರ್

contributor

Similar News