ಆಮಂತ್ರಣಕ್ಕೆ ಹೆಸರು ಮುದ್ರಿಸಿದರೆ ವೇದಿಕೆಯಲ್ಲೇ ಟಿಪ್ಪುವಿಗೆ ಧಿಕ್ಕಾರ ಕೂಗುವೆ: ಅನಂತ್ ಕುಮಾರ್ ಹೆಗಡೆ
ಶಿರಸಿ, ಅ.21: ಶಿಷ್ಟಾಚಾರದ ಹೆಸರಿನಲ್ಲಿ ಟಿಪ್ಪು ಜಯಂತಿಯ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರನ್ನು ಮುದ್ರಿಸಿದರೆ, ಟಿಪ್ಪುವಿನ ಇತಿಹಾಸವನ್ನು ಎಳೆಎಳೆಯಾಗಿ ಬಿಚ್ಚಿಟ್ಟು ವೇದಿಕೆಯಲ್ಲೇ ಧಿಕ್ಕಾರ ಕೂಗುತ್ತೇನೆ. ತಾಕತ್ತಿದ್ದರೆ ಸಿಎಂ ಸಿದ್ದರಾಮಯ್ಯ ಅವರು ತನ್ನ ಸವಾಲು ಎದುರಿಸಲಿ ಎಂದು ಕೇಂದ್ರ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ.
ಶಿರಸಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಾನೇ ತನ್ನ ಹೆಸರನ್ನು ಹಾಕುವುದು ಬೇಡ ಎಂದು ಹೇಳಿದ್ದರಿಂದ ಹೆಸರು ಹಾಕುವ ಅಗತ್ಯವಿಲ್ಲ. ಶಿಷ್ಟಾಚಾರ ಪಾಲನೆಗಾಗಿ ತನ್ನ ಹೆಸರನ್ನು ಯಾವುದೇ ಕಾರಣಕ್ಕೂ ಹಾಕುವುದು ಬೇಡ. ಕಳೆದ ಬಾರಿಯು ನಡೆದ ಟಿಪ್ಪುಜಯಂತಿಯ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ಹೆಸರು ಹಾಕುವುದು ಬೇಡ ಎಂದು ಸೂಚಿಸಿದ್ದೆ ಎಂದರು.
ಅದೇ ರೀತಿ ಈ ಬಾರಿ ಆಮಂತ್ರಣ ಪತ್ರಿಕೆಯಲ್ಲಿ ತನ್ನ ಹೆಸರು ಹಾಕುವುದು ಬೇಡ ಎಂದಿದ್ದೇನೆ. ಒಂದು ವೇಳೆ ಹೆಸರು ಹಾಕಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೌರವ ನೀಡುವ ದೃಷ್ಟಿಯಿಂದ ಅವರು ಇರುವ ವೇದಿಕೆಯಲ್ಲೇ ಟಿಪ್ಪುವಿನ ಇತಿಹಾಸವನ್ನು ಬಿಚ್ಚಿಟ್ಟು ಧಿಕ್ಕಾರ ಕೂಗುತ್ತೇನೆ ಎಂದು ಹೇಳಿದರು.
ತನ್ನ ಹೆಸರು ಹಾಕಬೇಡಿ ಎಂದು ಹೇಳಿರುವ ಕಾರಣ ಸರಕಾರಕ್ಕೆ ತನ್ನ ಹೆಸರು ಸೇರಿಸದಿರಲು ಅವಕಾಶವಿದೆ ಎಂದೂ ಸಚಿವರು ಸಮಜಾಯಿಷಿ ನೀಡಿದ್ದಾರೆ.