×
Ad

ಜೆಪಿ ದೇಶದ ಪ್ರಧಾನಿಯಾಗಿದ್ದರೆ ಇಂದು ಮೋದಿ ಅವರ ಆರ್ಭಟ ನಡೆಯುತ್ತಿರಲಿಲ್ಲ: ಚಂಪಾ

Update: 2017-10-21 22:25 IST

ಮೈಸೂರು, ಅ.21: ಸ್ವಾತಂತ್ರ್ಯ ನಂತರ ಮಹಾತ್ಮ ಗಾಂಧೀಜಿ ಪ್ರಧಾನಿ ಆಗಿದ್ದರೆ ಅಥವಾ ಅವರ ತತ್ವಗಳನ್ನು ಅಳವಡಿಸಿಕೊಂಡವರು ಪ್ರಧಾನಿ ಆಗಿದ್ದರೆ ಈ ದೇಶದಲ್ಲಿ  ತುರ್ತು ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ, ನಂತರ ಜಯಪ್ರಕಾಶ್ ನಾರಾಯಣ್(ಜೆಪಿ) ಈ ದೇಶದ ಪ್ರಧಾನಿಯಾಗಿ ಅಧಿಕಾರ ನಡೆಸಿದ್ದರೆ ಇಂದು ಕೇಂದ್ರದಲ್ಲಿ ಸರ್ವಾಧಿಕಾರಿ ಧೋರಣೆ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಆರ್ಭಟ ನಡೆಯುತ್ತಿರಲಿಲ್ಲ ಎಂದು ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಅಭಿಪ್ರಾಯಿಸಿದರು.

ನಗರದ ಸರಸ್ವತಿಪುರಂ ಜೆಎಸ್ ಎಸ್ ಮಹಿಳಾ ಕಾಲೇಜಿನಲ್ಲಿ ಶನಿವಾರ ತಳುಕಿನ ವೆಂಕಟಣ್ಣಯ್ಯ ಸ್ಮಾರಕ ಗ್ರಂಥಮಾಲೆ ಕನ್ನಡ ಸಾಹಿತ್ಯ ಕಲಾಕೂಟ ವತಿಯಿಂದ 83ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ ಅವರಿಗೆ ಸನ್ಮಾನ ಮತ್ತು 'ಚಂಪಾಂಕಣ' ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಬಳಿಕ ಅವರು ಮಾತನಾಡಿದರು.

ಮಹಾತ್ಮ ಗಾಂಧೀಜಿ ಮತ್ತು ಜೆಪಿಯವರ ಬಗ್ಗೆ ನನಗೆ ಆಕ್ಷೇಪವಿದೆ. ಏಕೆಂದರೆ ಈ ದೇಶದ ಪ್ರಭುತ್ವವನ್ನು ಅವರು ಸಾಧಿಸಿದ್ದರೆ ಈಗ ಆರ್ಭಟ ಮಾಡುವವರಿಗೆ ಶಕ್ತಿ ಇರುತ್ತಿರಲಿಲ್ಲ. ಸ್ವಾತಂತ್ರ್ಯ ಆಂದೋಲನದ ಐಕಾನ್ ಆಗಿ ಮುನ್ನಡೆಸಿದ ಗಾಂಧಿ ಒಮ್ಮೆ ಪ್ರಭುತ್ವವನ್ನು ಸಾಧಿಸಬೇಕಿತ್ತು. ಆದರೆ ಅದು ಆಗಲಿಲ್ಲ. 1975ರಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಹರಣ ಮಾಡಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದ ಇಂಧಿರಾ ಗಾಂಧಿ ತುರ್ತು ಪರಿಸ್ಥಿತಿ ಜಾರಿಯಾಗಲು  ಕಾರಣರಾದರೂ. ನಂತರದ ದಿನಗಳಲ್ಲಿ ಅವರಿಗೆ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಟೀಕಿಸಿದರು. 

ಸಮಾಜವಾದಿ ತತ್ವವನ್ನು ಮೈಗೂಡಿಸಿಕೊಂಡು ಕ್ರಾಂತಿಯನ್ನೇ ಉಂಟು ಮಾಡಿದ ಜಯಪ್ರಕಾಶ್ ನಾರಾಯಣ ಅವರಾದರೂ ಪ್ರಧಾನಿಯಾಗಿ ಅಧಿಕಾರ ನಡೆಸಬೇಕಿತ್ತು. ಇದ್ಯಾವುದು ಆಗದ ಕಾರಣ ಇಂದು ಕೆಲವರು ಬಲಿಷ್ಠರಾಗಿ ಅಧಿಕಾರ ನಡೆಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಈ ದೇಶದ ಪ್ರಧಾನಿ ಇಂದು ಸರ್ವಾಧಿಕಾರಿ ಧೋರಣೆ ತೋರುವ ವ್ಯಕ್ತಿತ್ವವನ್ನು ಅಳವಡಿಸಿಕೊಂಡಿದ್ದಾರೆ. ಪ್ರಜಾಪ್ರಭುತ್ವದ ಆಯ್ಕೆಯಾದ ಪ್ರಧಾನಿ ಆದರೂ ತಮ್ಮ ಒಳಗಿನ ಹುನ್ನಾರಗಳು ಇಂದು ಕೆಲಸ ಮಾಡುಸತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ವೇಳೆ ಪತ್ರಕರ್ತ ರಾಜಶೇಖರ 'ಕೋಟಿ ಚಂಪಾಂಕಣ' ಕೃತಿ ಲೋಕಾರ್ಪಣೆ ಗೊಳಿಸಿದರು.  

ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ದಿವ್ಯಸಾನಿಧ್ಯವನ್ನು ವಹಿಸಿದ್ದರು. ಕೃತಿ ಮತ್ತು ಸನ್ಮಾನಿತರ ಕುರಿತು ಪ್ರೊ.ಮಲೆಯೂರು ಗುರುಸ್ವಾಮಿ ಮಾತನಾಡಿದರು. ಪ್ರಕಾಶಕ ಟಿ.ಎಸ್.ಛಾಯಾಪತಿ, ಕನ್ನಡ ಸಾಹಿತ್ಯ ಕಲಾ ಕೂಟದ ಅಧ್ಯಕ್ಷ ಚಂದ್ರು ಉಪಸ್ಥಿತರಿದ್ದರು. 

ಸರ್ವಜನಾಂಗದ ಶಾಂತಿಯ ತೋಟ ಎಂಬ ನಮ್ಮ ನಾಡಿನಲ್ಲಿ ಕಲಬುರ್ಗಿ, ಗೌರಿ ಅಂತವರ ಹತ್ಯೆ ನಡೆಯಿತು. ಹಾಗಾದರೆ ಎಲ್ಲಿದೆ ಶಾಂತಿ? ಹೂ ಅರಳಬೇಕಿದ್ದ ತೋಟದಲ್ಲಿ ಇಂದು ರಕ್ತದ ಕಾರಂಜಿ ಚಿಮ್ಮುತ್ತಿದೆ. ಲಿಂಗಾಯತರಿಗೆ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ನಡೆಯುತ್ತಿದೆ. ಲಿಂಗಾಯತ ಮತ್ತು ವೀರಶೈವ ಕುರಿತು ಜನಸಾಮಾನ್ಯರೂ ಬೀದಿಗಿಳಿದು ಹೋರಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸುತ್ತೂರು ಶ್ರೀಗಳು ಸಮುಮ್ಮನಿರುವುದು ಸರಿಯಲ್ಲ ತಮ್ಮ ಮೌನ ಮುರಿದು ಮಾತನಾಡಬೇಕು. 
 -ಚಂಪಾ, ಸಾಹಿತಿ


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News