ಅಲ್ಪಸಂಖ್ಯಾತರ ಅಭಿವೃದ್ಧಿಗೆ ರಾಜ್ಯ ಸರಕಾರ ಶ್ರಮಿಸುತ್ತಿದೆ: ಡಾ.ಜಿ.ಪರಮೇಶ್ವರ್

Update: 2017-10-21 17:57 GMT

ತುಮಕೂರು, ಅ.21: ಅಲ್ಪಸಂಖ್ಯಾತ ಮುಸಲ್ಮಾನರು ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಹಾಗೂ ಆಡಳಿತಾತ್ಮಕವಾಗಿ ಮುಂದೆ ಬಂದಾಗ ಮಾತ್ರ ಈ ಸಮುದಾಯದ ಏಳಿಗೆ ಸಾಧ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಮುತವಲ್ಲಿಗಳ ಸಮಾವೇಶದಲ್ಲಿ ‘ತುಮಕೂರು ವಕ್ಫ್ ವೆಬ್‍ಸೈಟ್’ ಗೆ ಚಾಲನೆ ನೀಡಿ ಮಾತನಾಡಿದ ಅವರು, ಇಂದು ರಾಜ್ಯದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಮುಸಲ್ಮಾನ ಬಾಂಧವರು ಮುಖ್ಯ ವಾಹಿನಿಗೆ ಬರಬೇಕು ಎಂದು ಕರೆ ನೀಡಿದರು.

ಅಲ್ಪಸಂಖ್ಯಾತ ಸಮುದಾಯ ಶೈಕ್ಷಣಿಕ, ಸಾಮಾಜಿಕವಾಗಿ ಎಲ್ಲಾ ರಂಗದಲ್ಲೂ ಅಭಿವೃದ್ಧಿ ಆಗಬೇಕೆಂಬುದು ಕಾಂಗ್ರೆಸ್ ಸರ್ಕಾರದ ಆಶಯ. ಸ್ವಾತಂತ್ರ್ಯ ನಂತರದಲ್ಲಿ ಗಾಂಧೀಜಿಯರ ಸಿದ್ಧಾಂತದಂತೆ ಮುಸ್ಲಿಮರು ಎಲ್ಲರಂತೆ ಮುಂದುವರಿಯಬೇಕೆಂಬುದಾಗಿತ್ತು, ಅಲ್ಲದೆ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಂವಿಧಾನ ಕೊಟ್ಟಂತಹ ಸಂದರ್ಭದಲ್ಲಿ ಈ ದೇಶದಲ್ಲಿರುವ ಅಲ್ಪಸಂಖ್ಯಾತರು ಅವರವರ ಧರ್ಮಗಳನ್ನು ಅವರ ರೀತಿಯಲ್ಲಿ ಪಾಲನೆ ಮಾಡುವುದಕ್ಕೆ ಸಂವಿಧಾನಾತ್ಮಕವಾಗಿ ಹಕ್ಕು ನೀಡಲಾಗಿದೆ ಎಂದು ಹೇಳಿದ್ದಾರೆ. ಇಂತಹ ಧರ್ಮ ಪಾಲನೆ ನಮ್ಮ ದೇಶದಲ್ಲಿ ಬಿಟ್ಟರೆ ಬೇರೆಲ್ಲೂ ಕಂಡುಬರುವುದಿಲ್ಲ. ಇದು ನಮ್ಮ ದೇಶದ ಹೆಗ್ಗಳಿಕೆ ಎಂದು ನುಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಮಾತನಾಡಿ, ಇಂದು ನಡೆಯುತ್ತಿರುವ ಮುತವಲ್ಲಿಗಳ ಸಮಾವೇಶ ಅತ್ಯಂತ ಜವಾಬ್ದಾರಿಯನ್ನು ಹೆಚ್ಚುವಂತಹ ಕಾರ್ಯ ಇದಾಗಿದೆ. ಇಂತಹ ಸಮಾವೇಶ ನಾನು ಇದೇ ಮೊದಲು ನೋಡುತ್ತಿರುವುದು ಎಂದು ಸಂತಸ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ 2017-18ರಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅಲ್ಪಸಂಖ್ಯಾತರ ಇಲಾಖೆಗೆ 2800 ಕೋಟಿ ರೂ. ಮೀಸಲಿಟ್ಟಿದ್ದಾರೆ. ಕಳೆದ ನಾಲ್ಕು ವರ್ಷಗಳಿಗೆ ಹೋಲಿಕೆ ಮಾಡಿಕೊಂಡರೆ ಅತ್ಯಂತ ಹೆಚ್ಚಿನ ಅನುದಾನವನ್ನು ಈ ಸಾಲಿನಲ್ಲಿ ಮೀಸಲಿಟ್ಟು ಅಲ್ಪಸಂಖ್ಯಾತರ ಏಳಿಗೆಗೆ ಸರ್ಕಾರ ಶ್ರಮಿಸುತ್ತಿದೆ ಎಂದರು.

ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಹಿಂದೂ, ಮುಸಲ್ಮಾನ ಎಂಬ ಬೇಧ ಬಾವವಿಲ್ಲದೆ ಸಹೋದರತ್ವ ಭಾವನೆಯಿಂದ ನಡೆದುಕೊಂಡು ಹೋದಾಗ ಮಾತ್ರ ಶಾಂತಿ, ನೆಮ್ಮದಿ ಜೀವನ ಸಾಧ್ಯ. ಶಾಂತಿ ಕದಡುವ ಪ್ರಯತ್ನ ಯಾರಿದಂಲೂ ಆಗಬಾರದು ಎಂದು ಮನವಿ ಮಾಡಿದರು.

ಕೇಂದ್ರ ಸರ್ಕಾರದ ಸಚಿವರೊಬ್ಬರು ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ನನ್ನ ಹೆಸರು ಹಾಕಬೇಡಿ ಎಂದು ಹೇಳಿರುವುದು ಸಂವಿಧಾನಾತ್ಮಕ ವಿರೋಧವಾಗಿದೆ. ಎಲ್ಲರಿಂದಲೂ ಆಯ್ಕೆಯಾಗಿ ಜನಪ್ರತಿನಿಧಿಯಾಗಿ ಕೇಂದ್ರ ಸಚಿವರಾಗಿ ಒಂದು ಜಾತಿ, ಮತಕ್ಕೆ ಸೀಮಿತವಲ್ಲ ಎಂಬುದನ್ನು ತೋರಿಸಿಕೊಡಬೇಕು, ಅದನ್ನು ಬಿಟ್ಟು ಸರ್ಕಾರದ ಕಾರ್ಯಕ್ರಮಕ್ಕೆ ನನ್ನ ಹೆಸರು ಹಾಕಬೇಡಿ ಎಂಬ ಹೇಳಿಕೆ ನೀಡಿರುವುದು ಒಂದು ಕೆಟ್ಟ ಸಂದೇಶ ರವಾನಿಸಿದಂತಾಗುತ್ತದೆ. ಇದನ್ನು ಸಚಿವರು ಅರ್ಥಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಈ ವೇಳೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಹಾಗೂ ಸಮುದಾಯದ ಏಳಿಗೆಗೆ ಶ್ರಮಿಸಿದ ಅಲ್ಪಸಂಖ್ಯಾತ ಮುಖಂಡರನ್ನು ಅಜಿತ್ ಸೇಠ್ ಮೆಮೋರಿಯಲ್ ಅಕ್ಫ್ ಅವಾರ್ಡ್ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಿಕ್ಷಣ ಸಚಿವ ಹಾಗೂ ವಕ್ಫ್ ಸಚಿರ ತನ್ವೀರ್ ಸೇಠ್, ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್.ಸೀತಾರಾಂ,  ಪಾವಗಡ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿದರು. ತುಮಕೂರು ನಗರ ಶಾಸಕ ಡಾ.ಎಸ್.ರಫೀಕ್ ಅಹ್ಮದ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಎಸ್.ಶಫಿ ಅಹ್ಮದ್, ನವದೆಹಲಿ ಗಾಂಧಿ ಫೋರಂ ಪ್ರಧಾನ ಕಾರ್ಯದರ್ಶಿ ಸೈಯದ್ ಅಶ್ರಫ್, ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಇಕ್ಬಾಲ್ ಅಹ್ಮದ್, ಜಿಲ್ಲಾ ವಕ್ಫ್ ಅಧಿಕಾರಿ ಸಾದೀಕ್ ಪರ್ವೀನ್, ಪ್ರಜಾ ಪ್ರಗತಿ ಸಂಪಾದಕ ಎಸ್.ನಾಗಣ್ಣ, ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷ ಮುರಳೀಧರ ಹಾಲಪ್ಪ ಸೇರಿದಂತೆ ವಕ್ಫ್ ಸಲಹಾ ಸಮಿತಿಯ ಪದಾಧಿಕಾರಿಗಳು, ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಮುತವಲ್ಲಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News