ವಿಜ್ಞಾನ ಪ್ರಾಮಾಣಿಕತೆ, ಪಾರದರ್ಶಕತೆಯನ್ನು ಅನಾವರಣಗೊಳಿಸುತ್ತದೆ: ಡಾ.ಹರೀಶ್ ಭಟ್

Update: 2017-10-21 18:15 GMT

ನಾಗಮಂಗಲ, ಅ.21: ವಸ್ತುವಿನ ವಿಮರ್ಶೆ ಮತ್ತು ವಿಶ್ಲೇಷಣೆಗಳ ಸಮಾಗಮವೇ ವಿಜ್ಞಾನ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ.ಹರೀಶ್ ಭಟ್ ಹೇಳಿದ್ದಾರೆ.

ಪಟ್ಟಣದ ಬಿಜಿಎಸ್ ವಿಜ್ಞಾನ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ವಿಜ್ಞಾನ ಪರಿಷತ್‍ನ ಮಂಡ್ಯ ಜಿಲ್ಲಾ ಸಮಿತಿ ಹಾಗೂ ನಾಗಮಂಗಲ ವಿಜ್ಞಾನ ವೇದಿಕೆಯ ಸಂಯುಕ್ತಾಶ್ರಯದಲ್ಲಿ 'ನಿಸರ್ಗದ ಕೌತುಕಗಳು' ವಿಷಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜ್ಞಾನದ ನೆರಳಿನಲ್ಲಿ ಅನಾವರಣಗೊಂಡಿರುವ ವಿಜ್ಞಾನಕ್ಕೆ ಯಾವುದೇ ಭಾಷೆಯ ಪರಿಮಿತಿಯಿಲ್ಲ. ಕಾಲಘಟ್ಟಕ್ಕನುಗುಣವಾಗಿ ಅಗತ್ಯತೆಗಳನ್ನು ಪೂರೈಸುವುದೇ ವಿಜ್ಞಾನ. ಸಾಮಾನ್ಯ ಸಮಸ್ಯೆಗಳಿಗೆ ಉತ್ತಮ ಪರಿಹಾರ ಕಂಡುಕೊಳ್ಳುವ ಜ್ಞಾನವೇ ವಿಜ್ಞಾನ ಎಂದು ತಿಳಿಸಿದರು.

ಜ್ಞಾನ ನಂಬಿಕೆಯ ತಳಹದಿಯ ಮೇಲಿದ್ದರೆ, ವಿಜ್ಞಾನ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯನ್ನು ಅನಾವರಣಗೊಳಿಸುತ್ತದೆ. ಅಭ್ಯಾಸದ ದಿಸೆಯಲ್ಲಿರುವ ವಿದ್ಯಾರ್ಥಿಗಳಿಗೆ ಪ್ರಶ್ನಾತೀತ ಮನೋಭಾವವಿರಬೇಕು. ಮೌಢ್ಯತೆಗೆ ಅವಕಾಶ ಬೇಡ. ನಿಸರ್ಗ ಅಥವಾ ಪ್ರಕೃತಿಯ ಕೌತುಕಗಳು ವಿಜ್ಞಾನದ ಕ್ರಮಬದ್ಧ ಅನ್ವೇಷಣೆಗೆ ಸಹಕಾರಿ. ವಿದ್ಯಾರ್ಥಿಗಳು ಜ್ಞಾನಶಕ್ತಿಯೊಂದಿಗೆ ಕ್ರಿಯಾಶಕ್ತಿಯನ್ನು ಕ್ರಮಬದ್ಧ, ಮೌಲ್ಯಾಧಾರಿತವಾಗಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಪರಿಷತ್‍ನ ಜಿಲ್ಲಾ ಸಮಿತಿ ಅಧ್ಯಕ್ಷ ಚಿಕ್ಕಸ್ವಾಮಿ, ರಾಜ್ಯ ಸಮಿತಿ ಸದಸ್ಯ ಕೃಷ್ಣೇಗೌಡ, ಪ್ರಾಂಶುಪಾಲ ಚಂದ್ರಶೇಖರ್, ವಿಷಯ ಪರಿವೀಕ್ಷಕರಾದ ಪುಟ್ಟಸ್ವಾಮಿ, ರಾಜಮಣಿ ಹಾಗೂ ನಂಜರಾಜ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News